ಉಪ್ಪಿನಂಗಡಿಯಲ್ಲಿ ನಡೆದ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಮಂಗಳೂರಿನಲ್ಲಿ ಪಿಎಫ್‌ಐ ಪ್ರತಿಭಟನೆ
ಮಂಗಳೂರು, ಡಿ.17: ಉಪ್ಪಿನಂಗಡಿಯಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಪಿಎಫ್‌ಐ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಎಸ್ಪಿ ಕಚೇರಿ ಚಲೋ ಅಥವಾ ರ‍್ಯಾಲಿಗೆ ಅವಕಾಶ ಇಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಡಪಡಿಸಿದ್ದರೂ ಕೂಡ ಪಿಎಫ್‌ಐ ಕಾರ್ಯಕರ್ತರು ಹಂಪನಕಟ್ಟೆಯಿಂದ ಕ್ಲಾಕ್ ಟವರ್‌ವರೆಗೆ ಮೆರವಣಿಗೆ ನಡೆಸಿದರು.
ಕ್ಲಾಕ್ ಟವರ್ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ಸಂದರ್ಭ ಪಿಎಫ್‌ಐ ಮುಖಂಡರು ಎಸ್ಪಿ ಕಚೇರಿ ಚಲೋಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರಲ್ಲದೆ ಉಪ್ಪಿನಂಗಡಿ ಪೊಲೀಸರಿಂದ ದೌರ್ಜನ್ಯ ನಡೆದಿದೆ. ನಮಗೆ ನ್ಯಾಯ ಕೊಡಿ ಎಂದು ಆಗ್ರಹಿಸಿ ಧರಣಿ ನಡೆಸಿದರು.
ಬಳಿಕ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ಪ್ರತಿಭಟನಾಕಾರರ ಬಳಿ ಆಗಮಿಸಿ ಮನವಿ ಸ್ವೀಕರಿಸಿದರಲ್ಲದೆ 'ಪ್ರಕರಣದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಆಗಮಿಸಿ ಅಹವಾಲು ಆಲಿಸಿದರು.
ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಮಾತನಾಡಿ, ''ಕ್ರೌರ್ಯ ಮೆರೆದ ಉಪ್ಪಿನಂಗಡಿ ಪೊಲೀಸರ ವಿರುದ್ಧದ ಜನಾಂದೋಲನ ಇದಾಗಿದೆ. ಅಮಾಯಕರ ಮೇಲೆ ದೌರ್ಜನ್ಯ ಎಸಗಿದರೆ ಹೋರಾಟವೂ ಮುಂದುವರಿಯಲಿದೆ. ಪೊಲೀಸರ ಲಾಠಿಗೆ ಧರ್ಮ, ಜಾತಿ ಇಲ್ಲ ಎಂದು ಸ್ವತ: ಪೊಲೀಸರೇ ಹೇಳುತ್ತಾರೆ. ಆದರೆ ಜಿಲ್ಲೆಯ ಪೊಲೀಸರ ಲಾಠಿಗೆ ಧರ್ಮ, ಜಾತಿ, ರಾಜಕೀಯ ಇದೆ ಎಂಬುದಕ್ಕೆ ಜಿಲ್ಲೆಯಲ್ಲಿ ನಡೆದ ಹಲವು ಘಟನೆಗಳೇ ಸಾಕ್ಷಿಯಾಗಿದೆ ಎಂದರಲ್ಲದೆ, ಜಿಲ್ಲಾಧಿಕಾರಿಗೆ ಸವಾಲು ಹಾಕಿದ, ಎಸ್ಸೈಗೆ ನಿಂದಿಸಿ ತುಳಿಯುವುದಾಗಿ ಹೇಳಿದ ಸಂಘಪರಿವಾರದ ಮುಖಂಡರ ವಿರುದ್ಧ ಯಾಕೆ ಕ್ರಮವಿಲ್ಲ. ಬಹಿರಂಗವಾಗಿ ತ್ರಿಶೂಲ ವಿತರಿಸಿದರೂ ಮೌನ ಯಾಕೆ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿರುವ ಸಂಘಿ ಮನಸ್ಥಿತಿಯ ಪೊಲೀಸರು ಎಷ್ಟಿದ್ದಾರೆ ಎಬುದರ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ಶಾಫಿ ಬೆಳ್ಳಾರೆ ಆಗ್ರಹಿಸಿದರು.
ಪೊಲೀಸರು ದಾಖಲಿಸಿದ ಸುಳ್ಳು ಕೇಸುಗಳನ್ನು ವಾಪಸ್ ಪಡೆಯಬೇಕು. ತಪ್ಪಿತಸ್ಥ ಪೊಲೀಸರನ್ನು ಅಮಾನತುಗೊಳಿಸಬೇಕು, ಆಸ್ಪತ್ರೆಯಲ್ಲಿರುವ ಗಾಯಾಳುಗಳ ಖರ್ಚು ವೆಚ್ಚವನ್ನು ಭರಿಸಬೇಕು ಎಂದು ಪಿಎಫ್‌ಐ ಸರಕಾರದ ಮುಂದೆ ಬೇಡಿಕೆ ಸಲ್ಲಿಸಿತು.
ಪ್ರತಿಭಟನೆಯ ನೇತೃತ್ವವನ್ನು ಪಿಎಫ್‌ಐ ಮುಖಂಡರಾದ ಎ.ಕೆ. ಅಶ್ರಫ್, ಇಜಾಝ್ ಅಹ್ಮದ್, ಅಯ್ಯೂಬ್ ಅಗ್ನಾಡಿ, ಕಾರ್ಪೊರೇಟರ್ ಮುನೀಬ್ ಬೆಂಗರೆ, ಎಸ್‌ಡಿಪಿಐ ರಾಷ್ಟ್ರೀಯ ಮುಖಂಡ ಅಲ್ಫೋನ್ಸೋ ಫ್ರಾಂಕೊ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಮತ್ತಿತರರು ವಹಿಸಿದ್ದರು.