ಉಡುಪಿ ಜಿಲ್ಲಾ ಸಾರ್ವಜನಿಕ ಗ್ರಂಥಾಲಯಕ್ಕೆ ‘ಬನ್ನಂಜೆ ಗೋವಿಂದಾಚಾರ್ಯ’ ನಾಮಕರಣ
ಉಡುಪಿ, ಡಿ.17: ಉಡುಪಿ ಜಿಲ್ಲಾ ಸಾರ್ವಜನಿಕ ಗ್ರಂಥಾಲಯಕ್ಕೆ ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಕೇಂದ್ರ ಗ್ರಂಥಾಲಯ ಎಂದು ನಾಮಕರಣ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಸಾರಸ್ವತ ಕ್ಷೇತ್ರದಲ್ಲಿ ಉಡುಪಿಯ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಈ ನಾಡು ಕಂಡ ಶ್ರೇಷ್ಠ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ಸಾಹಿತಿ, ಕವಿ, ಪ್ರವಚನ ಕಾರ ಡಾ.ಬನ್ನಂಜೆ ಗೋವಿಂದಾಚಾರ್ಯರು. ಈ ದೇಶದ ಪ್ರಮುಖ ವಿದ್ವಾಂಸ ರಲ್ಲಿ ಒಬ್ಬರಾಗಿದ್ದ ಅವರ ವೇದ, ಪುರಾಣಗಳ ಕುರಿತ ಕೃತಿಗಳು, ಪ್ರವಚನಗಳು ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತಿದ್ದವು.
ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡ ಅವರು ಮಾಧವ ತತ್ವದಲ್ಲಿ ಅಮೋಘ ಪಾಂಡಿತ್ಯ ಸಾಧಿಸಿದ್ದರು. ಕನ್ನಡ, ತುಳು, ಸಂಸ್ಕೃತ ಭಾಷೆಗಳಲ್ಲಿ ಪಾರಂಗತರಾಗಿದ್ದು, ಪ್ರವಚನಕಾರರಾಗಿ ದೇಶ ವಿದೇಶಗಳಲ್ಲಿ ಅಪಾರ ಅಭಿ ಮಾನಿಗಳನ್ನು ಹೊಂದಿದ್ದರು. ಸಾರಸ್ವತ ಕ್ಷೇತ್ರದಲ್ಲಿ ವಿಶ್ವದೆಲ್ಲೆಡೆ ಉಡುಪಿ ಕೀರ್ತಿ ಯನ್ನು ಬೆಳಗಿದ ಬಹುಶ್ರುತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿದಾಚಾರ್ಯರ ಹೆಸರನ್ನು ಉಡುಪಿ ಜಿಲ್ಲಾ ಸಾರ್ವಜನಿಕ ಗ್ರಂಥಾಲಯಕ್ಕೆ ನಾಮಕರಣ ಮಾಡಿ ಗೌರವಿಸಲಾಗಿದೆ ಎಂದು ಆದೇಶ ತಿಳಿಸಲಾಗಿದೆ.