ಸೈಬರ್ ಕಣ್ಗಾವಲು ತಂಡಗಳಿಗೆ ನಿಷೇಧ ವಿಧಿಸಿದ ಫೇಸ್ಬುಕ್

Update: 2021-12-17 16:38 GMT

ನ್ಯೂಯಾರ್ಕ್, ಡಿ.17: ವಿಶ್ವದಾದ್ಯಂತ ಹೋರಾಟಗಾರರು, ಕಾರ್ಯಕರ್ತರು, ಭಿನ್ನಮತೀಯರು ಮತ್ತು ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಕಣ್ಗಾವಲು ಸೇವೆ ಒದಗಿಸುತ್ತಿದ್ದಾರೆ ಎಂದು ಶಂಕಿಸಲಾದ ಹಲವು ಸೈಬರ್ ತಂಡಗಳನ್ನು ನಿಷೇಧಿಸಲಾಗಿದೆ. ಈ ತಂಡ ವಿಶ್ವದಾದ್ಯಂತದ ಸುಮಾರು 50‌,000 ಜನರ ವಿರುದ್ಧ ಕಣ್ಗಾವಲು ನಡೆಸಿರುವ ಸಾಧ್ಯತೆಯಿದೆ ಎಂದು ಫೇಸ್ಬುಕ್ನ ಮಾತೃಸಂಸ್ಥೆ ಮೆಟಾ ಹೇಳಿದೆ.

7 ಖಾಸಗಿ ಕಣ್ಗಾವಲು ಸಂಸ್ಥೆಗಳು ಹ್ಯಾಕಿಂಗ್ ಹಾಗೂ ಇತರ ಅಕ್ರಮ ವ್ಯವಹಾರ ನಡೆಸುತ್ತಿರುವ ಮಾಹಿತಿ ಲಭಿಸಿದ ಬಳಿಕ ಸುಮಾರು ಫೇಸ್ಬುಕ್, ಇನ್‌ಸ್ಟಾಗ್ರಾಮ್  ಮತ್ತು ವಾಟ್ಸ್ಯಾಪ್‌ನ ಸುಮಾರು 1,500 ಖಾತೆಗಳನ್ನು ರದ್ದುಗೊಳಿಸಲಾಗಿದೆ. ಇದರಲ್ಲಿ ಹೆಚ್ಚಿನವು ನಕಲಿ ಖಾತೆಗಳು ಎಂದು ಮೆಟಾ ವರದಿ ಮಾಡಿದೆ. ಸೈಬರ್ ಕಣ್ಗಾವಲು ವ್ಯವಹಾರದಲ್ಲಿ ಅಗ್ರಸ್ಥಾನದಲ್ಲಿರುವ ಇಸ್ರೇಲ್ ಮೂಲದ ಕಾಬ್ವೆಬ್ಸ್ ಟೆಕ್ನಾಲಜೀಸ್, ಕಾಗ್ನೈಟ್, ಬ್ಲ್ಯಾಕ್ ಕ್ಯೂಬ್ ಹಾಗೂ ಬ್ಲೂಹಾಕ್ ಸಿಐ ಸಂಸ್ಥೆಗಳಿಗೆ ಸಂಬಂಧಿಸಿದ ಖಾತೆಗಳನ್ನು ಅಳಿಸಿ ಹಾಕಲಾಗಿದೆ ಎಂದು ಫೇಸ್ಬುಕ್ ಹೇಳಿದೆ. ಭಾರತ ಮೂಲದ ಬೆಲ್ಟ್ರಾಕ್ಸ್, ನಾರ್ತ್ ಮಸಡೋನಿಯಾದ ಸಂಸ್ಥೆ ಸೈಟ್ರಾಕ್ಸ್ ಮತ್ತು ಚೀನಾದ ಗುರುತಿಸಲಾಗದ ಸಂಸ್ಥೆಗೆ ಸಂಬಂಧಿಸಿದ ಖಾತೆಗಳನ್ನೂ ಮೆಟಾ ವೇದಿಕೆಯಿಂದ ಡಿಲೀಟ್ ಮಾಡಲಾಗಿದೆ.

ಸುಮಾರು 100ಕ್ಕೂ ಅಧಿಕ ದೇಶಗಳಲ್ಲಿನ ಸುಮಾರು 50,000 ಜನರ ಮೇಲೆ ಹಣ ಪಡೆದು ಸೇವೆ ಸಲ್ಲಿಸುವ ಈ ತಂಡ ಕಣ್ಣಿಟ್ಟಿರುವ ಸಾಧ್ಯತೆಯಿದೆ ಎಂದು ಮೆಟಾ ಗುರುವಾರ ಎಚ್ಚರಿಸಿದೆ. ಕಣ್ಗಾವಲು ಬಾಡಿಗೆ ಉದ್ಯಮಿಗಳ ಈ ತಂಡ ತಾನು ಸಂಗ್ರಹಿಸಿದ ಮಾಹಿತಿಗಳನ್ನು ಅತ್ಯಧಿಕ ಮೊತ್ತ ಪಾವತಿಸುವವರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಮೆಟಾ ಸಂಸ್ಥೆಯ ಭದ್ರತಾ ಕಾರ್ಯನೀತಿ ಸಮಿತಿಯ ಮುಖ್ಯಸ್ಥ ನಥಾನಿಯೆಲ್ ಗ್ಲೀಷರ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News