×
Ad

ಮೊಟ್ಟೆ ವಿಚಾರದಲ್ಲಿ ನನ್ನ ವಿರುದ್ಧ ಸಮಾಜವನ್ನು ಎತ್ತಿಕಟ್ಟಲು ಯತ್ನ: ಪೇಜಾವರ ಶ್ರೀ

Update: 2021-12-17 21:15 IST

ಉಡುಪಿ, ಡಿ.17: ಮಾಧ್ಯಮಗಳು ಸಮಾಜದ ಸ್ವಾಸ್ಥವನ್ನು ಕಾಪಾಡುವ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಆದರೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದುಸ್ಸಾಹಸಕ್ಕೆ ಯಾವುದೇ ಮಾಧ್ಯಮಗಳು ಕೈಹಾಕಬಾರದು. ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರದಲ್ಲಿ ನನ್ನ ಅಭಿಪ್ರಾಯ ತಿರುಚಿ ನನ್ನ ವಿರುದ್ಧ ಸಮಾಜವನ್ನು ಎತ್ತಿಕಟ್ಟುವ ಕಾರ್ಯ ಮಾಡಲಾಗಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿ ಪೇಜಾವರ ಮಠದಿಂದ ಬಿಡುಗಡೆ ಮಾಡಲಾಗಿರುವ ವಿಡಿಯೋ ದಲ್ಲಿ ಹೇಳಿಕೆ ನೀಡಿರುವ ಸ್ವಾಮೀಜಿ, ‘ಶಾಲೆಯಲ್ಲಿ ಮೊಟ್ಟೆ ವಿತರಣೆ ಕುರಿತಂತೆ ವಾಸ್ತವದಲ್ಲಿ ನನ್ನ ಅಭಿಪ್ರಾಯ ಪಡೆಯುವ ವೇಳೆ ಮಾಧ್ಯಮಗಳು ನಮಗೆ ನೀಡಿದ ಮಾಹಿತಿಯೇ ತಪ್ಪು. ಶಾಲೆಯಲ್ಲಿ ಸಾಮೂಹಿಕವಾಗಿ ಎಲ್ಲರಿಗೂ ಮೊಟ್ಟೆ ವಿತರಿಸಲಾಗುತ್ತಿದೆ, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದಾಗಿ ಕೇಳ ಲಾಗಿತ್ತು. ಅದಕ್ಕೆ ನಾವು, ಆಹಾರದ ಹಕ್ಕು, ಸ್ವಾತಂತ್ರ್ಯ ಎಲ್ಲರಿಗೂ ಇದೆ. ಸಸ್ಯ ಹಾರಿಗಳಿಗೆ ಮೊಟ್ಟೆ ತಿನ್ನಿಸುವ ಕೆಲಸ ಆಗಬಾರದು ಎಂದಿದ್ದೆ’ ಎಂದು ಹೇಳಿದರು.

ಶಾಲೆಯಲ್ಲಿ ಕೆಲವರಿಗೆ ಮೊಟ್ಟೆ ವಿತರಣೆ, ಕೆಲವರಿಗೆ ನೀಡದಿರುವುದು ಮತಬೇದಕ್ಕೆ ಕಾರಣವಾಗುತ್ತದೆ. ಆ ಕಾರಣಕ್ಕೆ ಶಾಲೆಯಲ್ಲಿ ಸಾಮೂಹಿಕವಾಗಿ ಮೊಟ್ಟೆ ನೀಡುವುದಕ್ಕೆ ಅಂದು ನಾನು ಮಾಧ್ಯಮದವರಲ್ಲಿ ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಮೊಟ್ಟೆ ತಿನ್ನುವವರಿಗೆ ಮೊಟ್ಟೆ ಕೊಡುತ್ತಾರೆ, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ನೀಡುತ್ತಾರೆ ಎಂಬುದು ನನಗೆ ಆ ನಂತರ ತಿಳಿಯಿತು ಎಂದು ಅವರು ತಿಳಿಸಿದರು.

ಈ ವಿಚಾರ ನಮಗೆ ತಿಳಿಸದೆ, ಮೊಟ್ಟೆ ಹಂಚುವ ಕುರಿತು ಅಭಿಪ್ರಾಯವೇನು ಎಂಬ ಅರ್ಧ ಸತ್ಯ ಅಂದರೆ ಅರ್ಧ ಸುಳ್ಳು ಕೇಳಿ ನಮ್ಮ ಅಭಿಪ್ರಾಯ ಪಡೆದಿದ್ದಾರೆ. ಸಮಾಜದ ಮುಂದೆ ನಮ್ಮ ಅಭಿಪ್ರಾಯ ಮುಂದಿಟ್ಟು ಶಾಲೆಯಲ್ಲಿ ಬಡ, ಆಶಕ್ತ, ದುರ್ಬಳ ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ಸ್ವಾಮೀಜಿ ವಿರೋಧಿಸುತ್ತಿದ್ದಾರೆ ಎಂದು ಪ್ರಸಾರ ಮಾಡಲಾಗಿದೆ. ಈ ಮೂಲಕ ಜನಸಮೂಹವನ್ನು ಎತ್ತಿ ಕಟ್ಟುವ ಕೆಲಸ ಮಾಧ್ಯಮ ಮಾಡಿದೆ. ಮಾಧ್ಯಮಗಳು ಸಮಾಜ ಸಂಘಟಿಸುವ ಕಾರ್ಯ ನಡೆಯಬೇಕು ಹೊರತು ಸಮಾಜ ಒಡೆಯುವ ಕೆಲಸ ಮಾಡ ಬಾರದು. ತಪ್ಪು ದಾರಿಗೆ ಎಳೆದು ಒಂದು ವರ್ಗವನ್ನು ಹೀಯಾಳಿಸುವ ಕೆಲಸ ಮಾಡಬಾರದೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News