ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ
ಉಡುಪಿ, ಡಿ.17: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಎಂಜಿಎಂ ಕಾಲೇಜು ಉಡುಪಿ ಇವುಗಳ ಆಶ್ರಯದಲ್ಲಿ ಬಾರಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಉಡುಪಿ ಜಿಲ್ಲಾ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಡಿ.27ರ ಸೋಮವಾರ ಬೆಳಗ್ಗೆ 9:30ರಿಂದ 11:30ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿಯಲ್ಲಿ ನಡೆಯಲಿದೆ.
ಆಸಕ್ತರು ಶಾಲಾ, ಕಾಲೇಜು ಗುರುತುಚೀಟಿ ಅಥವಾ ಪತ್ರದೊಂದಿಗೆ ಅಂದು ಬೆಳಗ್ಗೆ 9 ಗಂಟೆಗೆ ಸ್ಥಳದಲ್ಲೇ ಹೆಸರು ನೊಂದಾಯಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಭಾಗವಹಿಸಲು ಯಾವುದೇ ಸ್ಪರ್ಧಾ ಶುಲ್ಕವಿರುವುದಿಲ್ಲ.
ಸ್ಪರ್ಧಾ ವಿಷಯ: 5ರಿಂದ 7ನೇ ತರಗತಿ-ಐಚ್ಛಿಕ ವಿಷಯ, 8ರಿಂದ 10ನೇ ತರಗತಿ-ಉತ್ಸವ ದೃಶ್ಯ, ಪಿಯುಸಿ ವಿದ್ಯಾರ್ಥಿಗಳಿಗೆ- ಹಳ್ಳಿಯ ಬದುಕು, ಪದವಿ ವಿದ್ಯಾರ್ಥಿಗಳಿಗೆ- ಕೊರೋಾ ಲಾಕ್‌ಡೌನ್ ಕಾಲದ ಅನುಭವಗಳು.
ಚಿತ್ರ ಬಿಡಿಸಲು ಹಾಳೆಯನ್ನು ಸಂಘಟಕರು ನೀಡಲಿದ್ದು, ಉಳಿದ ಪರಿಕರ ಗಳನ್ನು ಸ್ಪರ್ಧಾಳುಗಳೇ ತರಬೇಕು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿರುತ್ತವೆ. ಅದೇ ದಿನ ಬಹುಮಾನ ವಿತರಣೆಯೂ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9448868868ನ್ನು ಸಂಪರ್ಕಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.