ಫ್ರಾನ್ಸ್: ನಕಲಿ ಆರೋಗ್ಯ ಕಾರ್ಡ್ ಚಲಾವಣೆ; 100 ಮಂದಿಯ ಬಂಧನ

Update: 2021-12-17 17:44 GMT
ಸಾಂದರ್ಭಿಕ ಚಿತ್ರ

ಪ್ಯಾರಿಸ್, ಡಿ.17: ಫ್ರಾನ್ಸ್ ನಲ್ಲಿ ಆರೋಗ್ಯ ಪಾಸ್ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ನಕಲಿ ಆರೋಗ್ಯ ಪಾಸ್ ನೀಡುವ ಜಾಲ ಕಾರ್ಯಾಚರಿಸುತ್ತಿದೆ. ಈಗ ಸುಮಾರು 1,10,000 ನಕಲಿ ಆರೋಗ್ಯ ಕಾರ್ಡ್ ಚಲಾವಣೆಯಲ್ಲಿದ್ದು ಈ ಕುರಿತ ದೂರಿನ ಹಿನ್ನೆಲೆಯಲ್ಲಿ ಇದುವರೆಗೆ ಸುಮಾರು 100 ಮಂದಿಯನ್ನು ಬಂಧಿಸಲಾಗಿದೆ ಎಂದು ಆಂತರಿಕ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕೊರೋನ ಸೋಂಕಿನ ವಿರುದ್ಧದ ಲಸಿಕೆ ಪಡೆದವರಿಗೆ, ಕೊರೋನ ಸೋಂಕಿನಿಂದ ಚೇತರಿಸಿಕೊಂಡವರಿಗೆ ಅಥವಾ ಇತ್ತೀಚಿನ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರಿಗೆ ನೀಡಲಾಗುವ ಆರೋಗ್ಯ ಪಾಸ್ ಪಡೆದವರು ಮಾತ್ರ ಸಾರ್ವಜನಿಕ ಸಾರಿಗೆಗಳಲ್ಲಿ, ಹೋಟೆಲ್‌ಗಳಲ್ಲಿ  ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ. ಈ ಕಾರಣದಿಂದ ನಕಲಿ ದಾಖಲೆ ಪತ್ರ ತಯಾರಿಸಿ ಆರೋಗ್ಯ ಕಾರ್ಡ್ ಒದಗಿಸುವ ಜಾಲ ಕಾರ್ಯಾರಂಭಿಸಿತ್ತು ಎಂದು ವರದಿಯಾಗಿದೆ.

ನಕಲಿ ಪಾಸ್‌ಗಳ  ಬಳಕೆದಾರರು ಹಾಗೂ ವಿತರಕರನ್ನು ವಿಚಾರಿಸಿದಾಗ, ವೈದ್ಯಕೀಯ ಸಿಬಂದಿಗಳೂ ಈ ವಂಚನೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ನಕಲಿ ದಾಖಲೆ ಪತ್ರದಲ್ಲಿರುವ ವೈದ್ಯರ ಸಹಿ ನಕಲಿ ಸಹಿ ಎಂದು ಸಾಬೀತುಪಡಿಸುವುದು ಕಷ್ಟದ ಕಾರ್ಯವಾಗಿದೆ . ಈ ಬಗ್ಗೆ ಸುಮಾರು 400 ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಬಳಿಕ 100 ಮಂದಿಯನ್ನು ಬಂಧಿಸಲಾಗಿದೆ . ಇವರಿಗೆ ಸುಮಾರು 5 ವರ್ಷ ಜೈಲುಶಿಕ್ಷೆ ಆಗಬಹುದು ಎಂದು ಆಂತರಿಕ ಇಲಾಖೆ ಸಚಿವ ಜೆರಾಲ್ಡ್ ಡರ್ಮಾನಿನ್ ಹೇಳಿದ್ದಾರೆ.

ಕಳೆದ ತಿಂಗಳು 220 ನಕಲಿ ಆರೋಗ್ಯ ಕಾರ್ಡ್ ಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ಪ್ಯಾರಿಸ್ನ ವೈದ್ಯರನ್ನು ಪೊಲೀಸರು ಬಂಧಿಸಿದ್ದರು. ಈ ಮಧ್ಯೆ, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ತುರ್ತು ನಿಗಾ ವ್ಯವಸ್ಥೆಯಡಿ ದಾಖಲಾಗುವ ರೋಗಿಗಳ ಪ್ರಮಾಣ ಕ್ರಿಸ್ಮಸ್ ಅವಧಿಯಲ್ಲಿ ಹೆಚ್ಚಬಹುದು ಎಂದು ಫ್ರಾನ್ಸ್ ಸರಕಾರ ಎಚ್ಚರಿಕೆ ನೀಡಿದೆ. ಬೂಸ್ಟರ್ ಲಸಿಕೆಯು ಕೊರೋನ ಸೋಂಕಿನ ತೀವ್ರತೆಯನ್ನು ಕಡಿಮೆಗೊಳಿಸುವುದರಿಂದ ಜನತೆ ಕಡ್ಡಾಯವಾಗಿ ಪಡೆಯಬೇಕು. ಇಲ್ಲದಿದ್ದರೆ ಜನವರಿ ಮಧ್ಯಭಾಗದ ಬಳಿಕ ಆರೋಗ್ಯ ಕಾರ್ಡ್‌ಗಳನ್ನು ಅಸಿಂಧುಗೊಳಿಸಲಾಗುವುದು ಎಂದು ಸರಕಾರ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News