ದಿಲ್ಲಿ ಗಲಭೆ ಪ್ರಕರಣ: ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರಿ ಮನವಿ

Update: 2021-12-17 18:09 GMT

 ಹೊಸದಿಲ್ಲಿ, ಡಿ. 17: 2020ರ ದಿಲ್ಲಿ ಗಲಭೆಗೆ ಕಾರಣವೆಂದು ಹೇಳಲಾದ ಪ್ರಚೋದನಾ ಭಾಷಣ ಹಾಗೂ ಹೇಳಿಕೆ ಕುರಿತು ಕೇಂದ್ರ ಸಚಿವ ಅನುರಾಗ ಠಾಕೂರ್ ಸೇರಿದಂತೆ ನಾಲ್ವರು ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಮನವಿ ಕುರಿತು ನಿರ್ಧರಿಸಲು ಸುಪ್ರೀಂ ಕೋರ್ಟ್ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿದೆ. 

ಕಳೆದ ವರ್ಷ ದಿಲ್ಲಿಯಲ್ಲಿ ಸಂಭವಿಸಿದ ಹಿಂಸಾಚಾರದ ಮೂವರು ಸಂತ್ರಸ್ತರು ಈ ಮನವಿ ಸಲ್ಲಿಸಿದ್ದಾರೆ. ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಪರ್ವೇಶ್ ವರ್ಮಾ, ಅಭಯ್ ವರ್ಮಾ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಹಾಗೂ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ನ ಇಬ್ಬರು ಸದಸ್ಯರ ಪೀಠ, ಈ ಪ್ರಕರಣವನ್ನು ಮೂರು ತಿಂಗಳೊಳಗೆ ತ್ವರಿತವಾಗಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ಗೆ ಸೂಚಿಸಿದೆ. 

ದಿಲ್ಲಿ ಉಚ್ಚ ನ್ಯಾಯಾಲಯ ವಿಚಾರಣೆಯನ್ನು ವಿಳಂಬ ಮಾಡುತ್ತಿದೆ ಎಂದು ಗಲಭೆ ಸಂತ್ರಸ್ತರು ತಿಳಿಸಿದ ಬಳಿಕ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ. ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ದಿಲ್ಲಿಯಿಂದ ಹೊರಗಿನ ಅಧಿಕಾರಿಗಳ ಸ್ವತಂತ್ರ ವಿಶೇಷ ತನಿಖಾ ಸಂಸ್ಥೆ (ಎಸ್ಐಟಿ)ಯನ್ನು ಸ್ಥಾಪಿಸುವಂತೆ ದೂರುದಾರರರು ಕೋರಿದ್ದಾರೆ. ‘‘ದೂರುದಾರರು ಭರವಸೆ ಕಳೆದುಕೊಂಡಿದ್ದಾರೆ. ಜಾಮಿಯಾ ವಿದ್ಯಾರ್ಥಿಗಳಿಗೆ ನ್ಯಾಯ ಸಿಕ್ಕಿದೆಯೇ? ದಿಲ್ಲಿ ಗಲಭೆ ಸಂತ್ರಸ್ತರಿಗೆ ನ್ಯಾಯ ಸಿಕ್ಕಿದೆಯೇ ? ವಿದ್ಯಾರ್ಥಿಗಳಿಗೆ ಬರ್ಬರವಾಗಿ ಥಳಿಸಲಾಗಿತ್ತು. ಅವರ ತಲೆ ಒಡೆಯಲಾಗಿತ್ತು’’ ಎಂದು ದೂರುದಾರರ ಪರ ವಕೀಲ ಕೂಲಿನ್ ಗೊನ್ಸಾಲ್ವೆಸ್ ಹೇಳಿದರು. 

ಸಮಯ ಮಿತಿ ಒಳಗಡೆ ಪ್ರಕರಣವನ್ನು ನಿರ್ಧರಿಸುವಂತೆ ಉಚ್ಚ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಮಾರ್ಚ್ನಲ್ಲಿ ನಿರ್ದೇಶನ ನೀಡಿದ ಹೊರತಾಗಿಯೂ ಹೈಕೋರ್ಟ್ ವಿಚಾರಣೆಯನ್ನು ವಿಳಂಬ ಮಾಡುತ್ತಿದೆ ಎಂದು ಅವರು ಗೊನ್ಸಾಲ್ವೆಸ್ ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News