×
Ad

ದ.ಕ. ಜಿಲ್ಲೆ; ಕೊರೋನ ಸೋಂಕಿತ 5 ಮಂದಿಯಲ್ಲಿ ಒಮೈಕ್ರಾನ್ ಪತ್ತೆ: ಡಿಸಿ ಡಾ. ರಾಜೇಂದ್ರ

Update: 2021-12-18 19:21 IST
ಸಾಂದರ್ಭಿಕ ಚಿತ್ರ

ಮಂಗಳೂರು, ಡಿ.18: ದೇಶದಲ್ಲಿ ನಿಧಾನವಾಗಿ ಹೆಚ್ಚುತ್ತಿರುವ ಒಮೈಕ್ರಾನ್ ಸೋಂಕು ದ.ಕ. ಜಿಲ್ಲೆಯಲ್ಲೂ ಕಾಣಿಸಿಕೊಂಡಿದ್ದು, ಡಿಸೆಂಬರ್ 10ರಂದು ಜೆನೊಮಿಕ್ ಸೀಕ್ವೆನ್ಸ್‌ಗಾಗಿ ಬೆಂಗಳೂರಿನ ನಿಮ್ಹಾನ್ಸ್ ಲ್ಯಾಬ್‌ಗೆ ಕಳುಹಿಸಿದ್ದ ಕೊರೋನ ಸೋಂಕಿತರ ಗಂಟಲ ದ್ರವದ ಮಾದರಿಯಲ್ಲಿ ಐದು ಮಂದಿಯಲ್ಲಿ ಒಮೈಕ್ರಾನ್ ಸೋಂಕು ಪತ್ತೆಯಾಗಿದೆ.

ನಗರದ ಹೊರವಲಯದ ವಸತಿ ಶಾಲೆ ಹಾಗೂ ನಗರದ ನರ್ಸಿಂಗ್ ಕಾಲೇಜೊಂದನ್ನು ಈಗಾಗಲೇ ಕೋವಿಡ್ ನಿಯಂತ್ರಿತ ವಲಯ (ಕ್ಲಸ್ಟರ್) ಗಳಾಗಿ ಘೋಷಿಸಲಾಗಿದೆ. ವಸತಿ ಶಾಲೆಯಲ್ಲಿ ಪತ್ತೆಯಾದ ಕೋವಿಡ್ ಸೋಂಕಿತರಲ್ಲಿ 16 ಮಂದಿಯ ಮಾದರಿಯನ್ನು ಜೆನೊಮಿಕ್ ಸೀಕ್ವೆನ್ಸ್‌ಗಾಗಿ ಕಳುಹಿಸಲಾಗಿದ್ದು, ಅವರಲ್ಲಿ ಇಂದು 4 ಮಂದಿಯಲ್ಲಿ ಒಮೈಕ್ರಾನ್ ಪತ್ತೆಯಾಗಿದೆ.

ನರ್ಸಿಂಗ್ ಕಾಲೇಜಿನ ಕೊರೋನ ಸೋಂಕಿತ 19 ಮಂದಿಯ ಮಾದರಿಯನ್ನು ಜೆನೊಮಿಕ್ ಸೀಕ್ವೆನ್ಸ್‌ಗಾಗಿ ಕಳುಹಿಸಲಾಗಿದ್ದು, ಅವರಲ್ಲಿ ಒಬ್ಬರಲ್ಲಿ ಒಮೈಕ್ರಾನ್ ಪತ್ತೆಯಾಗಿದೆ. ಎಲ್ಲರೂ ಆರೋಗ್ಯವಂತರಾಗಿದ್ದಾರೆ. ಈ ಐದು ಮಂದಿಯಲ್ಲಿ ನಾಲ್ಕು ಮಂದಿಯ ಮರು ತಪಾಸಣಾ ವರದಿಯು ಕೊರೋನ ನೆಗೆಟಿವ್ ಆಗಿದ್ದು, ಒಬ್ಬರಿಗೆ ಸೋಂಕು ತಗಲಿ 9 ದಿನಗಳಾಗಿವೆ. ಎಲ್ಲರೂ ವಿದ್ಯಾರ್ಥಿಗಳಾಗಿದ್ದು, ಆರೋಗ್ಯ ಅಧಿಕಾರಿಗಳು ಈ ವಲಯಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಸೋಂಕಿತರಾಗಲಿ ಅಥವಾ ಅವರ ಪೋಷಕರಾಗಲಿ ಯಾರೂ ಕೇರಳ ಅಥವಾ ಅಂತಾರಾಷ್ಟ್ರೀಯ ಪ್ರಯಾಣ ಇತಿಹಾಸವನ್ನು ಹೊಂದಿಲ್ಲ. ಯಾರಲ್ಲೂ ರೋಗ ಲಕ್ಷಣಗಳು ಕೂಡಾ ಇಲ್ಲವಾಗಿದ್ದು, ಎಲ್ಲರೂ ಆರೋಗ್ಯವಂತರಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಕೂಡಾ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News