ಮಹಿಳಾಶಕ್ತಿ ಮೂಲಕ ಸ್ವಚ್ಛ ಗ್ರಾಮ ನಿರ್ಮಾಣ ಸಾಧ್ಯ: ಲಾಲಾಜಿ ಮೆಂಡನ್
ಉಡುಪಿ, ಡಿ.18: ಮಹಿಳೆಯರಿಗೆ ತ್ಯಾಜ್ಯ ವಿಲೇವಾರಿ ಕುರಿತಂತೆ ಜಾಗೃತಿ ಮೂಡಿಸಿದಲ್ಲಿ, ಅವರು ತಮ್ಮ ತಮ್ಮ ಮನೆಗಳ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ, ಇಡೀ ಗ್ರಾಮವನ್ನು ಸ್ವಚ್ಛ ಗ್ರಾಮವಾಗಿ ರೂಪುಗೊಳ್ಳಲು ಇತರರಿಗೂ ಪ್ರೇರಣೆ ನೀಡಲಿದ್ದಾರೆ ಎಂದು ಕಾಪು ಶಾಸ ಲಾಲಾಜಿ ಆರ್ ಮೆಂಡನ್ ಹೇಳಿದ್ದಾರೆ.
ಹಿರಿಯಡ್ಕ ಸಮೀಪದ ಕೊಡಿಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ಶನಿವಾರ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ), ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಕೊಡಿಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ನಡೆದ ‘ಕೊಳಚೆ ಮುಕ್ತ ಗ್ರಾಮದಡೆ ಮಹಿಳಾ ಶಕ್ತಿ ನಡೆ: ದ್ರವ ತ್ಯಾಜ್ಯ ನಿರ್ವಹಣೆ’ ಮಾದರಿ ಗ್ರಾಮ ನಿರ್ಮಾಣದ ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅದು ದೊಡ್ಡ ಸಮಸ್ಯೆಯಾಗಲಿದ್ದು, ಇದರಿಂದ ಪರಿಸರಕ್ಕೆ ಸಹ ಹಾನಿಯಾಗಲಿದೆ. ನೈರ್ಮಲ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಜಿಲ್ಲೆಯಲ್ಲಿ ಈಗಾಗಲೇ ಒಣಕಸ ಸಂಗ್ರಹ ಉತ್ತಮವಾಗಿ ನಡೆಯುತ್ತಿದ್ದು, ಮನೆಯಲ್ಲಿ ಸಂಗ್ರಹವಾಗುವ ದ್ರವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಇದು ಜಲ ಮೂಲಗಳನ್ನು ಕಲುಷಿತಗೊಳಿಸಲಿದ್ದು, ಇದರಿಂದ ವಿವಿಧ ರೋಗಗಳ ಹರಡುವಿಕೆಗೆ ಕಾರಣವಾಗಲಿದೆ. ಗ್ರಾಮದ ಪ್ರತೀ ಮಹಿಳೆಯರಿಗೆ ದ್ರವ ತ್ಯಾಜ್ಯ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳೆಯರು ಜಾಗೃತವಾದಲ್ಲಿ ಸಮರ್ಪಕ ರೀತಿಯಲ್ಲಿ ಇದರ ವಿಲೇವಾರಿ ಸಾಧ್ಯವಾಗಲಿದೆ ಎಂದು ಲಾಲಾಜಿ ಮೆಂಡನ್ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಜಿಲ್ಲೆಯ 7 ಗ್ರಾಮ ಪಂಚಾಯತ್‌ಗಳಲ್ಲಿ ಆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ಕೊಳಚೆ ನೀರಿನ ಸಮರ್ಪಕ ನಿರ್ವಹಣೆ ಕುರಿತಂತೆ ಪ್ರಾಯೋಗಿಕವಾಗಿ ಅಭಿಯಾನ ಆರಂಭಿಸಿದ್ದು, ಒಂದು ತಿಂಗಳಿನ ಒಳಗೆ ಈ ಗ್ರಾಮಗಳನ್ನು ಕೊಳಚೆ ಮುಕ್ತ ಗ್ರಾಮಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಕೊಳಚೆ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಲಿದೆ ಹಾಗೂ ಅದು ಜಲ ಮೂಲಗಳನ್ನು ಸೇರುವುದರಿಂದ ಕುಡಿಯುವ ನೀರು ಕಲುಷಿತಗೊಂಡು ವಿವಿಧ ಬಗೆಯ ರೋಗಗಳಿಗೆ ಕಾರಣವಾಗಲಿದೆ. ಕೊಳಚೆ ನೀರನ್ನು ಸೋಕ್‌ಪಿಟ್‌ಗೆ ಅಥವಾ ಕಿಚನ್ ಗಾರ್ಡನ್‌ಗೆ ಬಳಸಬಹುದಾಗಿದ್ದು, ಸೋಕ್‌ಪಿಟ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿಯಲ್ಲಿ 14,000 ರೂ. ಸಹಾಯ ಧನ ನೀಡಲಾ ಗುವುದು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳನ್ನು ಕೊಳಚೆ ಮುಕ್ತ ಗ್ರಾಮಗಳನ್ನಾಗಿ ಮಾಡಲು ಪಂಚಾಯತ್‌ಗಳು ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದರು.
ಜಿಪಂನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಳಚೆ ಮುಕ್ತ ಗ್ರಾಮ ಕುರಿತು ಜಾಗೃತಿ ಮೂಡಿಸುವ ಸ್ಟಿಕ್ಕರ್ ಬಿಡುಗಡೆ ಹಾಗೂ ಸ್ವಚ್ಛತೆ ಕುರಿತು ಏರ್ಪಡಿಸಿದ್ದ ಸ್ಪರ್ಧೆ ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕೊಡಿಬೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಆಶಾ ಶೆಟ್ಟಿ,ಉಪಾಧ್ಯಕ್ಷ ಸದಾನಂದ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಪಿಡಿಓ ರೇವತಿ ಸ್ವಾಗತಿಸಿದರು.