×
Ad

ಗೋಧ್ರಾ ದಂಗೆಗಳ ಕುರಿತು ತನಿಖೆ ನಡೆಸಿದ್ದ ನ್ಯಾ.ನಾನಾವತಿ ನಿಧನ

Update: 2021-12-18 21:15 IST
photo:twitter/@TheQuint

ಹೊಸದಿಲ್ಲಿ,ಡಿ.18: 1984ರ ಸಿಖ್ ವಿರೋಧಿ ಮತ್ತು 2002ರ ಗೋಧ್ರಾ ದಂಗೆಗಳ ಕುರಿತು ತನಿಖೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಗಿರೀಶ ಠಾಕೂರಲಾಲ್ ನಾನಾವತಿ (86) ಅವರು ಶನಿವಾರ ಹೃದಯ ವೈಫಲ್ಯದಿಂದ ಗುಜರಾತಿನಲ್ಲಿ ನಿಧನರಾಗಿದ್ದಾರೆ.

1935,ಫೆ.17ರಂದು ಜನಿಸಿದ್ದ ನಾನಾವತಿ 1958,ಫೆ.11ರಂದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು. 1979,ಜು.19ರಂದು ಗುಜರಾತ ಉಚ್ಚ ನ್ಯಾಯಾಲಯದ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು,1994,ಜ.31ರಂದು ಒಡಿಸಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 1994,ಸೆ.28ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಗೊಂಡಿದ್ದರು. 1995,ಮಾ.6ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿಗೊಂಡಿದ್ದ ಅವರು 2000,ಫೆ.16ರಂದು ಸೇವೆಯಿಂದ ನಿವೃತ್ತರಾಗಿದ್ದರು.

ನ್ಯಾ.ನಾನಾವತಿ ಮತ್ತು ನ್ಯಾ.ಅಕ್ಷಯ ಮೆಹ್ತಾ ಅವರು 2002ರ ಗೋಧ್ರೋತ್ತರ ದಂಗೆಗಳ ಕುರಿತು ತಮ್ಮ ಅಂತಿಮ ವರದಿಯನ್ನು 2014ರಲ್ಲಿ ಆಗಿನ ಗುಜರಾತ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರಿಗೆ ಸಲ್ಲಿಸಿದ್ದರು. ದಂಗೆಗಳಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಸಾವಿರಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದರು. 2002ರಲ್ಲಿ ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ದಂಗೆಗಳ ಕುರಿತು ತನಿಖೆಗಾಗಿ ನಾನಾವತಿ-ಮೆಹ್ತಾ ಆಯೋಗವನ್ನು ರಚಿಸಿದ್ದರು.

ಎನ್‌ಡಿಎ ಸರಕಾರವು 1984ರ ಸಿಖ್ ವಿರೋಧಿ ದಂಗೆಗಳ ತನಿಖೆಗಾಗಿ ನಾನಾವತಿ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News