ಸಿಎಆರ್‌ನಲ್ಲಿ ಬಿಗಡಾಯಿಸಿದ ಆಹಾರದ ಬಿಕ್ಕಟ್ಟು: ಮಕ್ಕಳಲ್ಲಿ ತೀವ್ರಗೊಂಡ ಅಪೌಷ್ಟಿಕತೆಯ ಸಮಸ್ಯೆ

Update: 2021-12-18 16:04 GMT
ಸಾಂದರ್ಭಿಕ ಚಿತ್ರ(file photo:PTI)

ಬಾಂಗ್ಯು, ಡಿ.18: ಆಫ್ರಿಕಾ ಖಂಡದ ದೇಶ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್(ಸಿಎಆರ್)ನಲ್ಲಿ ಆಹಾರದ ಕೊರತೆಯ ಸಮಸ್ಯೆ ಬಿಗಡಾಯಿಸಿದ್ದು ಮಕ್ಕಳ ಆರೋಗ್ಯದ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ತೀವ್ರಗೊಂಡಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಸುಮಾರು 5 ಮಿಲಿಯನ್ ಜನಸಂಖ್ಯೆಯಿರುವ ಬಡದೇಶ ಸಿಎಆರ್‌ನಲ್ಲಿ  2013ರಲ್ಲಿ ಭುಗಿಲೆದ್ದ ಅಂತರ್ಯುದ್ಧದಿಂದ ಬೀತಿಗೊಂಡ ಸಾವಿರಾರು ಮಂದಿ ಮನೆ ಬಿಟ್ಟು ಪಲಾಯನ ಮಾಡಿದ್ದರು. ಇದರಿಂದ ದೇಶದಲ್ಲಿ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ, ಕಳೆದ ಅಕ್ಟೋಬರ್‌ನಲ್ಲಿ ಸಿಎಆರ್ ಅಧ್ಯಕ್ಷ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿದ್ದರೂ, ದೇಶದ ವಾಯವ್ಯ ಪ್ರಾಂತದಲ್ಲಿರುವ ಅಸ್ಥಿರತೆ ಮತ್ತು ಅಭದ್ರತೆಯ ಪರಿಸ್ಥಿತಿಯಿಂದ ಆ ಪ್ರದೇಶದಲ್ಲಿ ಕೃಷಿ ಮತ್ತಿತರ ಚಟುವಟಿಕೆಗೆ ತೊಡಕಾಗಿದ್ದು ಇದರಿಂದ ಆಹಾರದ ಸಮಸ್ಯೆ ತೀವ್ರಗೊಂಡಿದೆ. ಅಪೌಷ್ಟಿಕತೆಯಿಂದಾಗಿ ಅನಾರೋಗ್ಯಕ್ಕೆ ಒಳಗಾಗುವ ಮಕ್ಕಳನ್ನು ಹಿಡಿದುಕೊಂಡ ಹೆತ್ತವರು ನಗರದ ಆಸ್ಪತ್ರೆಗೆ ಧಾವಿಸುವುದು ದಿನನಿತ್ಯದ ದೃಶ್ಯವಾಗಿದೆ.

ತಾಯಂದಿರೇ ಅಪೌಷ್ಟಿಕತೆಯಿಂದ ಬಳಲುತ್ತಿರುವಾಗ ಎಳೆಯ ಶಿಶುಗಳಿಗೆ ತಾಯಿಯ ಎದೆಹಾಲು ಸಾಕಾಗುತ್ತಿಲ್ಲ. ವಿಶ್ವ ಸಂಸ್ಥೆಯ ಆಹಾರ ವಿಭಾಗವು ವಿಶ್ವ ಆಹಾರ ಯೋಜನೆಯಡಿ ಒದಗಿಸುತ್ತಿರುವ ಪಾಸ್ತಾದ ಪೊಟ್ಟಣಗಳೇ ಇಲ್ಲಿನ ಮಕ್ಕಳ ಜೀವರಕ್ಷಿಸುವ ಆಹಾರವಾಗಿದೆ. ಆಸ್ಪತ್ರೆಗೆ ದಾಖಲಾಗುವ ಬಹುತೇಕ ರೋಗಿಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣವೆಂದರೆ ಹಸಿವಿನ ಸಮಸ್ಯೆಯಾಗಿದೆ. ಬಡತನ ಮತ್ತು ಅಭದ್ರತೆಯ ಜತೆ ಈ ಸಮಸ್ಯೆ ಥಳಕು ಹಾಕಿಕೊಂಡಿದೆ. ಅಂತರ್ಯುದ್ಧದ ಪರಿಣಾಮ ಜನತೆ ಕೃಷಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಜೀವನಾಧಾರವೇ ನಷ್ಟವಾಗಿದೆ ಎಂದು ವೈದ್ಯಾಧಿಕಾರಿ ಮೊಡೆಸ್ಟೆ ಲೊಯೊ ಮೊಟಾಯೊ ಹೇಳಿದ್ದಾರೆ.

ಸೆಂಟ್ರಲ್ ಆಫ್ರಿಕಾ ಗಣರಾಜ್ಯದ 42% ಜನತೆ ದೈನಂದಿನ ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಈ ಪ್ರಮಾಣ ಮುಂದಿನ ವರ್ಷ ಹೆಚ್ಚಬಹುದು. ಈಗಲೂ ಸರಕಾರಿ ಪಡೆ ಹಾಗೂ ಬಂಡುಗೋರ ಪಡೆಯ ಮಧ್ಯೆ ಸಂಘರ್ಷ ನಡೆಯುತ್ತಿರುವ ದೇಶದ ವಾಯವ್ಯ ಪ್ರಾಂತದಲ್ಲಿ (ಚಾಡ್ ದೇಶದ ಗಡಿಭಾಗದಲ್ಲಿ) ಆಹಾರದ ಕೊರತೆ ತೀವ್ರವಾಗಿದೆ. ಊಹಮ್- ಪೆಂಡೆ ವಲಯದಲ್ಲಿ 61% ಜನತೆಗೆ ಆಹಾರದ ಕೊರತೆ ಎದುರಾಗಿದ್ದು ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ವಿಶ್ವ ಆರೋಗ್ಯ ಯೋಜನೆಯ ಅಧಿಕಾರಿಗಳು ವರದಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News