ಕೊವಾವ್ಯಾಕ್ಸ್ ಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ
ನ್ಯೂಯಾರ್ಕ್, ಡಿ.18: ಭಾರತದಲ್ಲಿ ಉತ್ಪಾದನೆಯಾಗಿರುವ ಕೊವಾವ್ಯಾಕ್ಸ್ ಲಸಿಕೆಯನ್ನು ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಅನುಮೋದನೆ ನೀಡಿದೆ.
ಇದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಲಸಿಕೆ ಪಟ್ಟಿಗೆ ಸೇರ್ಪಡೆಗೊಂಡ 9ನೇ ಲಸಿಕೆಯಾಗಿದೆ. ಅಮೆರಿಕದ ನೊವಾವ್ಯಾಕ್ಸ್ ಸಂಸ್ಥೆಯ ಲೈಸೆನ್ಸ್‌ನಡಿ ಕೊವಾವ್ಯಾಕ್ಸ್ ಕೋವಿಡ್ ಪ್ರತಿರೋಧಕ ಲಸಿಕೆಯನ್ನು ಪುಣೆಯ ಸೀರಂ ಸಂಸ್ಥೆ ಉತ್ಪಾದಿಸುತ್ತಿದೆ. ಕೊವಾವ್ಯಾಕ್ಸ್‌ನ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ದೊರಕಿರುವುದು ಭಾರತದ ಲಸಿಕೆ ಉತ್ಪಾದನೆ ಕ್ಷೇತ್ರದ ಮತ್ತೊಂದು ಸಾಧನೆಯಾಗಿದೆ.
ಸೀರಂ ಸಂಸ್ಥೆಯು ಅಸ್ಟ್ರಾಝೆನೆಕ ಸಂಸ್ಥೆಯೊಂದಿಗೆ ಕೋವಿಶೀಲ್ಡ್ ಲಸಿಕೆಯನ್ನೂ ಉತ್ಪಾದಿಸುತ್ತಿದೆ. ತುರ್ತು ಬಳಕೆ ಲೈಸೆನ್ಸ್ ಕೊವಾವ್ಯಾಕ್ಸ್ ಲಸಿಕೆಯನ್ನು ಕೊರೋನ ಸೋಂಕಿನ ವಿರುದ್ಧದ ಪ್ರತಿರೋಧಕ ಶಕ್ತಿಯಾಗಿ ಭಾರತದಲ್ಲಿ ಹಾಗೂ ಪರವಾನಿಗೆ ಪಡೆದ ಪ್ರದೇಶಗಳಲ್ಲಿ ಬಳಸುವುದಕ್ಕೆ ಸಂಬಂಧಿಸಿದೆ. ಇದುವರೆಗೆ ಕೊವಾವ್ಯಾಕ್ಸ್ ಲಸಿಕೆಗೆ ಭಾರತದ ಔಷಧ ನಿಯಂತ್ರಕ ಪ್ರಾಧಿಕಾರ ಡಿಸಿಜಿಐ ಯಿಂದ ತುರ್ತು ಬಳಕೆಯ ಅನುಮೋದನೆ ಲಭಿಸಿಲ್ಲ.