×
Ad

ಕರಾಚಿಯಲ್ಲಿ ಸ್ಫೋಟ; ಕನಿಷ್ಟ 10 ಮಂದಿ ಮೃತ್ಯು

Update: 2021-12-18 23:34 IST
photo:PTI

ಇಸ್ಲಮಾಬಾದ್, ಡಿ.18: ಪಾಕಿಸ್ತಾನದ ಕರಾಚಿ ನಗರದಲ್ಲಿ ಶನಿವಾರ ಒಳಚರಂಡಿ ವ್ಯವಸ್ಥೆಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಟ 10 ಮಂದಿ ಮೃತಪಟ್ಟಿದ್ದು ಇತರ 13 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ದಾಖಲಾಗಿದ್ದಾರೆ ಎಂದು ಕರಾಚಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಕರಾಚಿಯ ಶೇರ್‌ಶಾ ಪ್ರದೇಶದ ಪರಾಚಾ ವೃತ್ತದ ಬಳಿಯಿರುವ ಖಾಸಗಿ ಬ್ಯಾಂಕ್‌ನ ಕೆಳಗಡೆಯಿದ್ದ ಚರಂಡಿಯ ಮೂಲಕ ಸಾಗಿದ್ದ ಅನಿಲ ಪೂರೈಕೆಯ ಪೈಪ್‌ಲೈನ್‌ನಲ್ಲಿ ಸ್ಫೋಟ ಸಂಭವಿಸಿರುವ ಸಾಧ್ಯತೆಯಿದೆ ಎಂದು ಪೊಲೀಸ್ ವಕ್ತಾರ ಸೊಹೈಲ್ ಹೇಳಿದ್ದಾರೆ.

ಸ್ಫೋಟದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಲಾಗಿದೆ. ಸ್ಫೋಟದಿಂದ ಸಮೀಪದ ಕಟ್ಟಡಗಳ ಕಿಟಕಿ ಗಾಜು ಪುಡಿಯಾಗಿದೆ. ಕಟ್ಟಡದ ಎದುರು ಪಾರ್ಕ್ ಮಾಡಲಾಗಿದ್ದ ಕಾರುಗಳು ಮತ್ತು ಬೈಕ್‌ಗಳಿಗೆ  ತೀವ್ರ ಹಾನಿಯಾಗಿದೆ. ಕಟ್ಟಡದ ಕೆಲಭಾಗ ಕುಸಿದುಬಿದ್ದಿದ್ದು ಕಟ್ಟಡದ ಅವಶೇಷಗಳನ್ನು ಬೃಹತ್ ಯಂತ್ರ ಬಳಸಿ ತೆರವುಗೊಳಿಸಲಾಗುತ್ತಿದೆ ಎಂದು ಕರಾಚಿಯ ಆಡಳಿತಾಧಿಕಾರಿ ಮುತಝಾರ್ ವಹಾಬ್ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಕರಾಚಿಯಲ್ಲಿ ಒಳಚರಂಡಿಯನ್ನು ಆಕ್ರಮಿಸಿ ಹಲವು ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಒಳಚರಂಡಿಯ ಮೇಲೆ ಕಾಂಕ್ರೀಟ್ ನೆಲಹಾಸು ರಚಿಸಿ ಕಟ್ಟಡ ನಿರ್ಮಿಸಿರುವ ಬಗ್ಗೆ ದೂರುಗಳು ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News