ಸ್ವಾಯತ್ತ ಶಸ್ತ್ರಾಸ್ತ್ರ ವ್ಯವಸ್ಥೆ ನಿಯಂತ್ರಣದ ಕುರಿತ ವಿಶ್ವಸಂಸ್ಥೆಯ ಸಭೆ ವಿಫಲ
ವಿಶ್ವಸಂಸ್ಥೆ, ಡಿ.18: ಹಂತಕ ರೊಬೊಟ್‌ಗಳು ಎಂದೇ ಹೆಸರಾಗಿರುವ ಸ್ವಾಯತ್ತ ಶಸ್ತ್ರಾಸ್ತ್ರ ವ್ಯವಸ್ಥೆಯ ಬಳಕೆಯ ನಿಯಂತ್ರಣಕ್ಕೆ ಅಂತರಾಷ್ಟ್ರೀಯ ಒಪ್ಪಂದ ಸಾಧಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಆಯೋಜಿಸಿದ್ದ ಸಭೆ ಮೊಟಕುಗೊಂಡಿರುವುದಕ್ಕೆ ಹಲವು ದೇಶಗಳ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಉತ್ಪಾದಿಸುವ ದೇಶಗಳ ವಿರೋಧದ ಕಾರಣ ಸಭೆ ಮೊಟಕುಗೊಂಡಿದೆ. ಈಗ ಬಳಕೆಯಲ್ಲಿರುವ ಡ್ರೋನ್‌ನಂತಹ ಅರೆ ಸ್ವಾಯತ್ತ ಅಸ್ತ್ರಗಳಲ್ಲಿ ‘ಕೊಲ್ಲುವ ಆದೇಶ’ನೀಡುವ ಬಟನ್‌ಗಳು ಮನುಷ್ಯರ ನಿಯಂತ್ರಣದಲ್ಲಿರುತ್ತದೆ. ಆದರೆ ಪೂರ್ಣ ಸ್ವಾಯತ್ತ ಶಸ್ತ್ರಾಸ್ತ್ರಗಳಲ್ಲಿ ಸಾಫ್ಟ್‌ವೇರ್‌ಗಳು ಹಾಗೂ ಯಂತ್ರಗಳು ಬದುಕು ಮತ್ತು ಸಾವಿನ ಕುರಿತು ನಿರ್ಧರಿಸುತ್ತವೆ.
ಲಿಬಿಯಾದಲ್ಲಿ ಪ್ರಥಮ ಸ್ವತಂತ್ರ ಡ್ರೋನ್ ದಾಳಿ ನಡೆಯಬಹುದು ಎಂದು ಕಳೆದ ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯ ಸಮಿತಿಯ ವರದಿಯೊಂದು ಉಲ್ಲೇಖಿಸಿದ ಬಳಿಕ ಇಂತಹ ಅಸ್ತ್ರಗಳ ಉತ್ಪಾದನೆಯನ್ನು ನಿಯಂತ್ರಣದ ತುರ್ತು ಅಗತ್ಯದ ಮನವರಿಕೆಯಾಗಿದೆ. ಕೆಲವು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಸಭೆ (ಸಿಸಿಡಬ್ಲ್ಯೂ) ನಡೆಸಿ ನೂತನ ನಿಯಮ ರೂಪಿಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರ್ರಸ್ 125 ದೇಶಗಳಿಗೆ ಕರೆ ನೀಡಿದ್ದರು. ಆದರೆ ಶುಕ್ರವಾರ ನಡೆದ ಸಿಸಿಡಬ್ಯ್ಲೂ 6ನೇ ಸಭೆಯು ಮಾರಣಾಂತಿಕ ಸ್ವಾಯತ್ತ ಶಸ್ತ್ರಾಸ್ತ್ರ ವ್ಯವಸ್ಥೆಯ ಅಭಿವೃದ್ಧಿ ಮತ್ತು ಬಳಕೆಯ ನಿಯಂತ್ರಣದ ಕುರಿತ ಮುಂದಿನ ಮಾತುಕತೆಯ ದಿನಾಂಕ ನಿಗದಿಪಡಿಸಲು ವಿಫಲವಾಗಿದೆ.
ಈ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಭಾರೀ ಮೊತ್ತ ಹೂಡಿಕೆ ಮಾಡಿರುವ ದೇಶಗಳು ನಿಯಂತ್ರಣ ಕ್ರಮದ ಬಗ್ಗೆ ಒಪ್ಪಂದಕ್ಕೆ ವಿರೋಧ ಸೂಚಿಸಿವೆ. ವಿರೋಧಿಸಿದ ದೇಶಗಳಲ್ಲಿ ರಶ್ಯಾ,ಭಾರತ ಹಾಗೂ ಅಮೆರಿಕ ಸೇರಿವೆ . 68 ದೇಶಗಳು ಒಪ್ಪಂದದ ಪರ ನಿಲುವು ತಳೆದಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.