ಪತ್ನಿಯ ಸಹಾಯದಿಂದ ಬಾಲಕಿಯ ಮೇಲೆ ಅತ್ಯಾಚಾರ: ಸ್ವಘೋಷಿತ ದೇವಮಾನವ ಸೆರೆ

Update: 2021-12-19 07:24 GMT
Photo: Newindianexpress

ಚೆನ್ನೈ: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಒಂದು ವರ್ಷದ ಹಿಂದೆ ಗರ್ಭಿಣಿಯಾಗಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಘೋಷಿತ ದೇವಮಾನವ ಮತ್ತು ಆತನ ಪತ್ನಿಯನ್ನು ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳು ಬಾಲಕಿಯ ಬೆತ್ತಲೆ ಚಿತ್ರಗಳನ್ನು ತೆಗೆದು, ಗರ್ಭಪಾತ ಮಾಡದಿದ್ದರೆ 
ಫೋಟೊಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಆರೋಪಿ ಸತ್ಯನಾರಾಯಣನ್ ಮತ್ತು ಆತನ ಪತ್ನಿ ಪುಷ್ಪಲತಾ ನಗರದಲ್ಲಿ ‘ಶಿರಡಿಪುರಂ ಸರ್ವ ಶಕ್ತಿ ಪೀಠ ಸಾಯಿಬಾಬಾ ಕೊಯಿಲ್’ ಎಂಬ ದೇವಸ್ಥಾನವನ್ನು ಹೊಂದಿದ್ದಾರೆ. ಪೊಲೀಸರ ಪ್ರಕಾರ, ಪುಷ್ಪಲತಾ ಸಂತ್ರಸ್ತೆಗೆ 16 ವರ್ಷವಿದ್ದಾಗ ಆಕೆಯ ಮೇಲೆ ಅತ್ಯಾಚಾರ ಮಾಡಲು ಸತ್ಯ ನಾರಾಯಣನ್‌ಗೆ ಸಹಾಯ ಮಾಡಿದ್ದರು ಎಂದು ಆರೋಪಿಸಲಾಗಿದೆ.

"ನಾನು 12 ನೇ ತರಗತಿಯಲ್ಲಿದ್ದಾಗ ನನ್ನ ಅಜ್ಜಿಯ ಮನೆಯಲ್ಲಿಯೇ ಇದ್ದೆ. ನಾವು ಆಗಾಗ್ಗೆ ದೇವಸ್ಥಾನಕ್ಕೆ ಹೋಗುತ್ತಿದ್ದೆವು ಮತ್ತು 12 ಏಪ್ರಿಲ್ 2016 ರಂದು ಪವಿತ್ರ ಬೂದಿಯನ್ನು ಪಡೆಯುವಂತೆ ನನ್ನನ್ನು ಕೇಳಲಾಯಿತು. ನಾನು ದೇವಸ್ಥಾನಕ್ಕೆ ಹೋದಾಗ ಪುಷ್ಪಲತಾ ನನಗೆ ಜ್ಯೂಸ್ ಕೊಟ್ಟಳು ಮತ್ತು ಎರಡು ಗಂಟೆಗಳ ನಂತರ ನಾನು ಬಟ್ಟೆ ಇಲ್ಲದೆ ಹಾಸಿಗೆಯ ಮೇಲೆ ಅವರಿಬ್ಬರ ಪಕ್ಕದಲ್ಲಿ ಮಲಗಿದ್ದೆ,” ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತೆಯ ಮೇಲೆ ʼಪಾಪದ ಹೊರೆʼ ಇದೆ ಎಂದು ಸತ್ಯ ನಾರಾಯಣನ್ ಹೇಳಿಕೊಂಡಿದ್ದು, ಆಕೆಯನ್ನು ಅದರಿಂದ ಮುಕ್ತಗೊಳಿಸಿದ್ದಾರೆ ಎಂದು ಹೇಳಿದ್ದಾಗಿ ಎಫ್‌ಐಆರ್‌ ನಲ್ಲಿ ಆರೋಪಿಸಲಾಗಿದೆ. ಬಳಿಕ ಫೋಟೋಗಳನ್ನು ತೋರಿಸಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದು, ಬಳಿಕ ಸಂತ್ರಸ್ತೆ ಸ್ಥಳದಿಂದ ಹೊರಬಂದು 2018 ರಲ್ಲಿ ಮದುವೆಯಾಗಿದ್ದರು.

ಆಕೆಯ ಪತಿ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿದ ನಂತರ, ಸತ್ಯಾ ನಾರಾಯಣನ್ ಮಾರ್ಚ್ 2020 ರಲ್ಲಿ ಸಂತ್ರಸ್ತೆಗೆ ಕರೆ ಮಾಡಿದ್ದ ಎನ್ನಲಾಗಿದೆ. “ಅವರು ನಾನು ಒಬ್ಬಂಟಿಯಾಗಿದ್ದೇನೆ ಎಂದು ತಿಳಿದುಕೊಂಡು ಅವರನ್ನು ಭೇಟಿ ಮಾಡುವಂತೆ ಬೆದರಿಕೆ ಹಾಕಿದರು, ಇಲ್ಲದಿದ್ದರೆ ನನ್ನ ಪತಿಗೆ ಚಿತ್ರಗಳನ್ನು ಕಳುಹಿಸುತ್ತೇನೆ ಎಂದರು. ನಂತರದ ತಿಂಗಳುಗಳಲ್ಲಿ ಅವನು ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ”ಎಂದು ಸಂತ್ರಸ್ತೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಜುಲೈ 2020 ರಲ್ಲಿ, ಸಂತ್ರಸ್ತೆ ತಾನು ಗರ್ಭಿಣಿಯಾಗಿದ್ದೇನೆಂದು ತಿಳಿದುಕೊಂಡಿದ್ದು, ಈ ವಿಚಾರ ಆರೋಪಿಗಳಿಬ್ಬರಿಗೆ ತಿಳಿದಾಗ, ಅವರು ಗರ್ಭಪಾತ ಮಾಡುವಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಈ ವರ್ಷದ ಜನವರಿಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು.

ಆಕೆಯ ಪತಿ ಕುಟುಂಬವನ್ನು ಭೇಟಿ ಮಾಡಿ ನವೆಂಬರ್‌ನಲ್ಲಿ ವಿದೇಶಕ್ಕೆ ಮರಳಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯು ಸಂತ್ರಸ್ತೆಯನ್ನು ಮತ್ತೊಮ್ಮೆ ಭೇಟಿಯಾಗುವಂತೆ ಒತ್ತಾಯಿಸಿದ್ದ. ಈ ವೇಳೆ ಸಂತ್ರಸ್ತೆ ಪತಿಗೆ ಮಾಹಿತಿ ನೀಡಿದ್ದು, ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸತ್ಯ ನಾರಾಯಣನ್ ಮತ್ತು ಆತನ ಪತ್ನಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಬ್ಬರ ವಿರುದ್ಧ IPC 328 (ನಿದ್ರಾಜನಕದಿಂದ ನೋವುಂಟುಮಾಡುವುದು), IPS 376 (ಅತ್ಯಾಚಾರ), IPC 506 (ii) (ಕ್ರಿಮಿನಲ್ ಬೆದರಿಕೆ), POCSO ಕಾಯಿದೆ, ಸೆಕ್ಷನ್ 5 (f) (ಲೈಂಗಿಕ ದೌರ್ಜನ್ಯ), ಸೆಕ್ಷನ್ 11 ಸೇರಿದಂತೆ ಒಂಬತ್ತು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗೆ ಸತ್ಯನಾರಾಯಣನಿಗೆ ‘ಶಿರಡಿಪುರಂ ನಾನಾ ಬಾಬಾ’ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಇದ್ದು, ಆಧ್ಯಾತ್ಮಿಕತೆಯ ಕುರಿತು 300 ಕ್ಕೂ ಹೆಚ್ಚು ವೀಡಿಯೋಗಳು ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News