ಉದ್ಯೋಗದ ಹಕ್ಕಿಗಾಗಿ ಯುವಜನರ ಪಾದಯಾತ್ರೆ: ಮಂಗಳೂರು ನಗರ ಡಿವೈಎಫ್‌ಐ ಪೂರ್ವಭಾವಿ ಸಭೆ
ಮಂಗಳೂರು, ಡಿ.19: ನಿರುದ್ಯೋಗ ಸಮಸ್ಯೆ ಸ್ವತಂತ್ರ ಭಾರತ ಎಂದೂ ಕಂಡು ಕೇಳರಿಯದಂತಹ ಭೀಕರ ಸ್ವರೂಪಕ್ಕೆ ಬಂದಿದೆ. ಪ್ರತಿ ಮನೆಯಲ್ಲೂ ನಿರುದ್ಯೋಗಿ ಯುವಜನರ ದಂಡೇ ನಿರ್ಮಾಣಗೊಂಡಿದೆ. ವಿದ್ಯಾವಂತ ಯುವಜನರ ಕನಸುಗಳು ಭಗ್ನಗೊಂಡು ಹತಾಶತೆಗೆ ಒಳಗಾಗಿದ್ದಾರೆ. ಯುವಜನರ ಪಾಲಿಗೆ ಕರಾಳವಾಗಿರುವ ಈ ಭೀಕರ ನಿರುದ್ಯೋಗ ಸಮಸ್ಯೆಯ ವಿರುದ್ಧ ನಿರ್ಣಾಯಕ ಆಂದೋಲನವನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಡಿವೈಎಫ್‌ಐ ಮಂಗಳೂರು ನಗರ ಸಮಿತಿ ಆಯೋಜಿಸಿದ ಯುವಜನರ ನಡಿಗೆ ಉದ್ಯೋಗದ ಕಡೆಗೆ... ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಲು ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಒತ್ತಾಯಿಸಿ ಕೈಗೊಳ್ಳಲಿರುವ ಯುವಜನರ ಪಾದಯಾತ್ರೆಯ ಸಿದ್ದತೆಗಾಗಿ ನಗರದ ಬೋಳಾರದ ಎ.ಕೆ.ಜಿ ಭವನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್. ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು.
ವೇದಿಕೆಯಲ್ಲಿ ಡಿವೈಎಫ್‌ಐ ಮಂಗಳೂರು ನಗರ ಸಮಿತಿ ಅಧ್ಯಕ್ಷ ನವೀನ್ ಕೊಂಚಾಡಿ, ಕಾರ್ಯದರ್ಶಿ ಸಾದಿಕ್ ಕಣ್ಣೂರು ಉಪಸ್ಥಿತರಿದ್ದರು.