ಕೇಂದ್ರ ಸರಕಾರದಿಂದ ಸರ್ವಾಧಿಕಾರಿ ಧೋರಣೆ ಪ್ರದರ್ಶನ: ಜೆ.ಸುರೇಶ್
ಉಡುಪಿ, ಡಿ.19: ಕೋವಿಡ್ ಸಂಕಷ್ಟದ ನಡುವೆಯೂ ಸರಕಾರದ ನೀತಿಗಳ ಪರಿಣಾಮ ಬಂಡವಾಳಶಾಹಿಗಳು ತಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳುತಿತಿದ್ದು, ದೇಶದ ಅಸಂಖ್ಯಾತ ಕಾರ್ಮಿಕರು ಅತೀವ ತೊಂದರೆಗೀಡಾಗಿದ್ದಾರೆ. ದೇಶದ ಕಾರ್ಪೋರೇಟ್ ವಲಯಕ್ಕೆ ಮಣೆಹಾಕುವ ಈ ಸರಕಾರವು ಬಂಡವಾಳಶಾಹಿ ಗಳ 10 ಕೋಟಿ 27 ಲಕ್ಷದಷ್ಟು ಹಣವನ್ನು ಮನ್ನಾ ಮಾಡಿದೆ ಎಂದು ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಜತೆ ಕಾರ್ಯದರ್ಶಿ ಜೆ.ಸುರೇಶ್ ಆರೋಪಿಸಿದ್ದಾರೆ.
ವಿಮಾ ನೌಕರರ ಸಂಘ ಉಡುಪಿ ವಿಭಾಗದ ವತಿಯಿಂದ ಉಡುಪಿಯ ಎಲ್‌ಐಸಿ ಎಂಪ್ಲಾಯಿಸ್ ಕೋ-ಆಪರೇಟಿವ್ ಬ್ಯಾಂಕಿನ ವಜ್ರಮಹೋತ್ಸವ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ 63ನೇ ವಿಭಾಗೀಯ ಸಮ್ಮೇಳನ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾರ್ವಜನಿಕ ರಂಗವನ್ನು ಖಾಸಗಿ ವಲಯಕ್ಕೆ ವಹಿಸಿಕೊಡುವ ಮೂಲಕ ಆರು ಲಕ್ಷ ಕೋಟಿಗಳಷ್ಟು ಹಣವನ್ನು ಮುಂದಿನ ನಾಲ್ಕು ವರ್ಷಗಳಿಗೆ ಕ್ರೋಡಿಕರಿಸುವ ಯೋಜನೆ ಹಾಕಿಕೊಂಡಿದೆ. ಆತ್ಮನಿರ್ಭರ ಭಾರತದ ಕಲ್ಪನೆಗೆ ವ್ಯತಿರಿಕ್ತವಾಗಿ ಇಂದಿನ ಸರಕಾರವು ದೇಶದ ಕೈಗಾರಿಕೆಗಳನ್ನು ಖಾಸಗಿಯವರಿಗೆ ಮಾರುತ್ತಿದೆ. ಗಣತಂತ್ರ ಭಾರತದ ಎಲ್ಲಾ ಅಂಗಗಳನ್ನು ದುರುಪಯೋಗಪಡಿಸಿ ಕೊಂಡು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಅವರು ಟೀಕಿಸಿದರು.
ಸರಕಾರವು ಎಲ್‌ಐಸಿಯ ಶೇರು ವಿಕ್ರಯದ ಮೂಲಕ ಒಂದು ಲಕ್ಷ ಕೋಟಿ ಯಷ್ಟು ಹಣ ಸಂಗ್ರಹದ ಗುರಿಯನ್ನು ಇಟ್ಟುಕೊಂಡಿದೆ. ಈ ಶೇರು ವಿಕ್ರಯದ ಪ್ರಕ್ರಿಯೆಯು ಸಾರ್ವಜನಿಕ ರಂಗವನ್ನು ಬಂಡವಾಳಶಾಹಿಗಳಿಗೆ ತೆರೆದಿಡುವ ಮೂಲಕ ದೇಶದ 40 ಕೋಟಿಗಳಷ್ಟು ಪಾಲಿಸಿದಾರರ ಹಿತಾಸಕ್ತಿಗಳಿಗೆ ಮಾರಕವಾಗಲಿದೆ. ಎಲ್‌ಐಸಿಯನ್ನು ದುರ್ಬಲಗೊಳಿಸುವ ಸರಕಾರದ ಈ ನೀತಿಗಳ ವಿರುದ್ಧ ಸಂಘಟಿತರಾಗಿ ಹೋರಾಡಬೇಕೆಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಸಿಐಟಿಯು ಉಡುಪಿ ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ಮಾತನಾಡಿ, ಸರಕಾರಿ ಒಡೆತನದ ಬಿಎಸ್‌ಎನ್‌ಎಲ್‌ನ್ನು ವ್ಯವಸ್ಥಿತವಾಗಿ ನಿರ್ನಾಮಗೊಳಿಸಲು ಹೊರಟಿರುವ ಈ ಸರಕಾರವು ಇಂದು ಎಲ್‌ಐಸಿಯನ್ನು ಶೇರು ವಿಕ್ರಯದ ಮೂಲಕ ಖಾಸಗೀಕರಿಸಲು ಉದ್ಧೇಶಿಸಿದೆ. ಸಾರ್ವಜನಿಕ ಉದ್ಧಿಮೆಗಳನ್ನು ಸಾರಾಸಗಟಾಗಿ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವ ಸರಕಾರದ ನೀತಿಗಳ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಿಮಾ ನೌಕರರ ಸಂಘದ ಅಧ್ಯಕ್ಷ ಕೆ.ವಿಶ್ವನಾಥ್ ವಹಿಸಿದ್ದರು. ಸಭೆಯಲ್ಲಿ ವಿಮಾ ಪಿಂಚಣಿದಾರರ ಸಂಘದ ಜತೆ ಕಾರ್ಯದರ್ಶಿ ಶ್ರೀಪತಿ ಉಪಾಧ್ಯ, ಎಲ್‌ಐಸಿ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕುಶಾಲ್ ಕುಮಾರ್, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಗಳ ಸಂಘದ ಮುಂದಾಳು ದೇವಪ್ಪನಾಯಕ್, ವಿಮಾ ನೌಕರರ ಸಂಘದ ಮಹಿಳಾ ಸಂಚಾಲಕಿ ನಿರ್ಮಲ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 2021-22ರ ಸಾಲಿಗೆ ಸಂಘದ ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ವಿಶ್ವನಾಥ್, ಉಪಾಧ್ಯಕ್ಷರು ಗಳಾಗಿ ಡೆರಿಕ್ ಎ.ರೆಬೆಲ್ಲೋ, ಶೇಖರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಯಾಗಿ ಪ್ರಭಾಕರ ಬಿ.ಕುಂದರ್, ಜತೆ ಕಾರ್ಯದರ್ಶಿಗಳಾಗಿ ಉಮೇಶ್, ಕವಿತಾ ಎಸ್., ಕೋಶಾಧಿಕಾರಿಯಾಗಿ ಶ್ರೀಪಾದ ಹೆರ್ಳೆ, ಉಪ ಕೋಶಾಧಿಕಾರಿಯಾಗಿ ಸುರೇಶ್ ಎಲ್. ಆಯ್ಕೆಯಾದರು.
ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ರತ್ನಾ ಬಾಲಕೃಷ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ದರು. ಸಮ್ಮೇಳನದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸುಮಾರು 200 ಸದಸ್ಯರು ಭಾಗವಹಿಸಿದ್ದರು.