×
Ad

ಉಡುಪಿ: ಇಬ್ಬರಲ್ಲಿ ಕೊರೋನ ಸೋಂಕು; ಓರ್ವ ಮೃತ್ಯು

Update: 2021-12-19 20:05 IST

ಉಡುಪಿ, ಡಿ.19: ಜಿಲ್ಲೆಯಲ್ಲಿ 14 ದಿನಗಳ ಬಳಿಕ ಹಿರಿಯ ಮಹಿಳೆಯೊಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ರವಿವಾರ ಇಬ್ಬರು ಮಾತ್ರ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ ಆರು ಮಂದಿ ರೋಗದಿಂದ ಗುಣಮುಖರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆ 25ಕ್ಕಿಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಡಿ.4ರ ಬಳಿಕ ಇಂದು ಕುಂದಾಪುರದ 74ರ ಹರೆಯದ ಮಹಿಳೆ ಯೊಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಜ್ವರ, ಕೆಮ್ಮು ಹಾಗೂ ತೀವ್ರವಾದ ಉಸಿರಾಟ ತೊಂದರೆಯಿಂದ ಬಳಲುತಿದ್ದ ಇವರು ಶನಿವಾರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 478ಕ್ಕೇರಿದೆ.

ದಿನದಲ್ಲಿ ಪಾಸಿಟಿವ್ ಬಂದ ಇಬ್ಬರೂ ಪುರುಷರಾಗಿದ್ದು, ಇಬ್ಬರು ಸಹ ಉಡುಪಿಯವರು. ಇಬ್ಬರನ್ನೂ ಅವರ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರ ಸೋಂಕಿನಿಂದ ಆರು ಮಂದಿ ಗುಣಮುಖರಾಗುವ ಮೂಲಕ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 76,477ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3198 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,980ಕ್ಕೇರಿದೆ.

384 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿಂದು ಒಟ್ಟು 384 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 29 ಮಂದಿ ಮೊದಲ ಡೋಸ್ ಹಾಗೂ 355 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ.ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 21 ಮಂದಿ ಮೊದಲ ಡೋಸ್ ಹಾಗೂ 238 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 8 ಮಂದಿ ಮೊದಲ ಡೋಸ್ ಹಾಗೂ 117 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News