×
Ad

ಬಂಗ್ರಕೂಳೂರು: ಕಸದ ರಾಶಿಗೆ ಬೆಂಕಿ; ತಪ್ಪಿದ ಅನಾಹುತ

Update: 2021-12-19 20:45 IST

ಮಂಗಳೂರು, ಡಿ.19: ನಗರ ಹೊರವಲಯದ ಬಂಗ್ರಕೂಳೂರು ಬಳಿಯ ಪೋರ್ತ್‌ಮೈಲ್‌ನಲ್ಲಿ ಕಸದ ರಾಶಿಗೆ ಬೆಂಕಿ ಬಿದ್ದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ. ಅವಘಡದಿಂದ ಬೆಂಕಿಯ ಜ್ವಾಲೆ ಹಾಗೂ ದಟ್ಟ ಹೊಗೆಗೆ ಜನರು ತೀವ್ರ ಗಾಬರಿಗೊಂಡರು. ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ವರ್ಗವು ಬೆಂಕಿ ನಂದಿಸಿದ ಕಾರಣ ಭಾರೀ ಅನಾಹುತ ತಪ್ಪಿತು.

ಪೋರ್ತ್‌ ಮೈಲ್ ಬಳಿ ಸ್ಟಾಕ್ ಎಕ್ಸೇಂಜ್‌ಗೆ ಸೇರಿದ 10 ಎಕರೆ ಖಾಲಿ ಜಾಗವಿದ್ದು, ಇಲ್ಲಿ ವಾಹನಗಳಲ್ಲಿ ತಂದು ತ್ಯಾಜ್ಯ ಎಸೆದು ಹೋಗುತ್ತಾರೆ. ಈ ತ್ಯಾಜ್ಯ ರಾಶಿಗೆ ರವಿವಾರ ಮಧ್ಯಾಹ್ನ ಬೆಂಕಿ ಬಿದ್ದ ಕಾರಣ ಕೆಲಕಾಲ ಆತಂಕ ಸೃಷ್ಟಿಯಾಯಿತು. ಮನಪಾ ಸ್ಥಳೀಯ ಸದಸ್ಯ ಕಿರಣ್ ಕುಮಾರ್ ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಠಾಣೆಯ ಗಮನ ಸೆಳೆದ ಪರಿಣಾಮ ಕ್ಷಿಪ್ರಗತಿಯ ಕಾರ್ಯಾಚರಣೆ ನಡೆಸಲಾಯಿತು.

ಕಳೆದ ಫೆಬ್ರವರಿ ತಿಂಗಳಿನಲ್ಲೂ ಈ ತ್ಯಾಜ್ಯರಾಶಿಗೆ ಬೆಂಕಿ ಬಿದ್ದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೂಳೂರು, ಉರ್ವಸ್ಟೋರ್, ಕುಂಟಿಕಾನ ತನಕ ದಟ್ಟ ಹೊಗೆ ತುಂಬಿಕೊಂಡಿತ್ತು.

ತ್ಯಾಜ್ಯ ಹಾಕದಂತೆ ಎಚ್ಚರಿಕೆ: ಈ ಪ್ರದೇಶದಲ್ಲಿ ತ್ಯಾಜ್ಯ ತಂದು ಹಾಕುವುದನ್ನು ತಡೆಯಲು ಮನಪಾ ಸದಸ್ಯ ಕಿರಣ್ ಕುಮಾರ್ ಮನಪಾ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಸ್ಥಳದಲ್ಲಿ ಬೋರ್ಡ್ ಅಳವಡಿಸಿ ತ್ಯಾಜ್ಯ ಹಾಕದಂತೆ ಎಚ್ಚರಿಕೆ ನೀಡಿದ್ದರು. ಆದರೆ ಇದರಿಂದ ತ್ಯಾಜ್ಯ ಎಸೆತಕ್ಕೆ ಕಡಿವಾಣ ಬಿದ್ದಿರಲಿಲ್ಲ. ಇದರ ಸಮೀಪದಲ್ಲೇ ಜನವಸತಿ ಪ್ರದೇಶವೂ ಇದೆ. ಹುಲ್ಲಿನ ಮೂಲಕ ಬೆಂಕಿ ಹೊತ್ತಿಕೊಂಡು ಹೋದರೆ ಅಲ್ಲಿರುವ ನೂರಾರು ಮನೆಗಳಿಗೆ ಅಪಾಯವಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News