ಫಿಲಿಪ್ಪೀನ್ಸ್: ಟೈಫೂನ್ ರಾಯ್ ಗೆ 63 ಬಲಿ
ಮನಿಲಾ,ಡಿ.19: ರಾಯ್ ಚಂಡಮಾರುತದ ಆರ್ಭಟಕ್ಕೆ ಕೇಂದ್ರ ಮನಿಲಾದ ದ್ವೀಪ ಬೊಹೊಲ್ ಪ್ರಾಂತದ ವಿವಿಧೆಡೆ ಒಟ್ಟು 63 ಮಂದಿ ಬಲಿಯಾಗಿದ್ದಾರೆ ಎಂದು ಅಲ್ಲಿನ ರಾಜ್ಯಪಾಲರು ತಿಳಿಸಿದ್ದಾರೆ. ಇದರೊಂದಿಗೆ ಈ ವರ್ಷ ಫಿಲಿಫ್ಫೀನ್ಸ್ ರಾಷ್ಟ್ರದಲ್ಲಿ ಚಂಡಮಾರುತದ ಹಾವಳಿಯಿಂದಾಗಿ ಮೃತರಾದವರ ಸಂಖ್ಯೆ 137ಕ್ಕೇರಿದೆ.
ರಾಯ್ ಟೈಫೂನ್ (ಚಂಡಮಾರುತ ) ಅಪ್ಪಳಿಸಿದ ಬಳಿಕ ಬೊಹೊಲ್ ಪ್ರಾಂತದಲ್ಲಿ ಇನ್ನೂ 10 ಮಂದಿ ನಾಪತ್ತೆಯಾಗಿದ್ದಾರೆ ಹಾಗೂ 13 ಮಂದಿ ಗಾಯಗೊಂಡಿದ್ದಾರೆ. ಸಂವಹನಸಾಧನಗಳ ಕಡಿದುಹೋಗಿರುವ ಕಾರಣ ಬೊಹೊಲ್ ಪ್ರಾಂತದ 48 ನಗರಗಳ ಪೈಕಿ 33 ನಗರಗಳ ಮೇಯರ್ ಗಳಿಗೆ ಮಾತ್ರ ತನ್ನನ್ನು ಸಂಪರ್ಕಿಸಲು ಸಾಧ್ಯವಾಗಿದೆ ಎಂದು ರಾಜ್ಯಪಾಲ ಅರ್ಥರ್ ಯಾಪ್ ತಿಳಿಸಿದ್ದಾರೆ. ಈ ವಿಕೋಪದಲ್ಲಿ ಬಹುತೇಕ ಸಾವುಗಳು ಭೂಕುಸಿತ ಹಾಗೂ ಪ್ರವಾಹದಿಂದಾಗಿ ಸಂಭವಿಸಿರುವುದಾಗಿ ಅವರು ಹೇಳಿದ್ದಾರೆ.
ಚಂಡಮಾರುತದಿಂದಾಗಿ ಸಂತ್ರಸ್ತರಾಗಿರುವ ಪ್ರಾಂತದ 10.20 ಲಕ್ಷ ಮಂದಿಯ ಕುಡಿಯುವ ನೀರು ಹಾಗೂ ಆಹಾರದ ಪೊಟ್ಟಣಗಳನ್ನು ಒದಗಿಸಲು ಮೇಯರ್ಗಳು ತಮ್ಮ ತುರ್ತು ಸನ್ನಿವೇಶಕಾಲದ ಅಧಿಕಾರವನ್ನು ಬಳಸಿಕೊಳ್ಳಬೇಕೆಂದು ಯಾಪ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫಿಲಿಫ್ಫೀನ್ಸ್ ಅಧ್ಯಕ್ಷ ರೊಡ್ರಿಗೊ ಡ್ಯುಟೆರೆಟ್ರೆ ಅವರು ಬೊಹೊಲ್ ಪ್ರಾಂತದ ತಂಡಮಾರುತ ಪೀಡಿ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದು 4 ಕೋಟಿ ಡಾಲರ್ ಮೊತ್ತದ ನೆರವನ್ನು ಪ್ರಕಟಿಸಿದ್ದಾರೆ. ತಾಸಿಗೆ 195 ಕಿ.ಮೀ. ವೇಗದ ಗಾಳಿಯೊಂದಿಗೆ ಟೈಫೋನ್ ರಾಯ್ ಬೊಹೊಲ್ ಪ್ರಾಂತದ ಕರಾವಳಿಯ ಮೇಲೆ ತಾಸಿಗೆ 168 ಮೈಲುಗಳ ವೇಗದಲ್ಲಿ ಅಪ್ಪಳಿಸಿತು.
ಲೊಬೊಕ್ ಪಟ್ಟಣದ ಬೊಹೊಲ್ ನದಿ ತೀರದಲ್ಲಿ ಪ್ರವಾಹದ ಮಟ್ಟವು ತ್ವರಿತವಾಗಿ ಏರಿಕೆಯಾಗಿದ್ದು, ಹಲವಾರು ನಿವಾಸಿಗಳು ಮನೆಯ ಛಾವಣಿಗಳು ಹಾಗೂ ಮರಗಳಲ್ಲಿ ಆಶ್ರಯಪಡೆದುಕೊಂಡಿದ್ದಾರೆ. ಪ್ರಾಂತದ ಮೂರು ವಿಮಾನನಿಲ್ದಾಣಗಳಿಗೆ ಚಂಡಮಾರುತದಿಂದಾಗಿ ಹಾನಿಯಾಗಿದ್ದು, ಎರಡನ್ನು ಸಂಪೂರ್ಣವಾಗಿ ಮುಚ್ಚುಗಡೆಗೊಳಿಸಲಾಗಿದೆ.