ದಿಲ್ಲಿ ಕೋರ್ಟ್ ಸ್ಫೋಟ ಪ್ರಕರಣದ ಆರೋಪಿ ಡಿಆರ್‌ಡಿಒ ವಿಜ್ಞಾನಿಯಿಂದ ಆತ್ಮಹತ್ಯೆ ಯತ್ನ

Update: 2021-12-20 05:17 GMT
ಭರತ್ ಭೂಷಣ್ ಕಟಾರಿಯಾ (Photo: ndtv.com)

ಹೊಸದಿಲ್ಲಿ: ದಿಲ್ಲಿಯ ನ್ಯಾಯಾಲಯವೊಂದರಲ್ಲಿ ಸ್ಫೋಟಕ ಇರಿಸಿದ ಆರೋಪದ ಮೇಲೆ ಬಂಧಿತರಾಗಿರುವ ಡಿಫೆನ್ಸ್ ರಿಸರ್ಚ್ ಎಂಡ್ ಡೆವಲೆಪ್ಮೆಂಟ್ ಆರ್ಗನೈಝೇಶನ್ (ಡಿಆರ್‌ಡಿಒ) ವಿಜ್ಞಾನಿಯು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಶಂಕಿಸಲಾಗಿದ್ದು ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿರುವ ಆತನನ್ನು ಏಮ್ಸ್ ಗೆ ದಾಖಲಿಸಲಾಗಿದೆ.

ಆರೋಪಿ, 47 ವರ್ಷದ ಭರತ್ ಭೂಷಣ್ ಕಟಾರಿಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಆತ ಲಿಕ್ವಿಡ್ ಹ್ಯಾಂಡ್ ವಾಶ್ ಸೇವಿಸಿದ್ದಾರೆಂದು ತಿಳಿದು ಬಂದಿದ್ದು ಆತನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವರದಿಯಾಗಿದೆ.

ತನ್ನ ನೆರೆಮನೆಯ ವ್ಯಕ್ತಿ, ವಕೀಲರಾಗಿರುವ ಅಮಿತ್ ವಶಿಷ್ಠ್ ಎಂಬಾತನನ್ನು ಗುರಿಯಾಗಿಸಿ ಆರೋಪಿ ವಿಜ್ಞಾನಿಯು ದಿಲ್ಲಿಯ ರೋಹಿಣಿ ಕೋರ್ಟಿನಲ್ಲಿ ಸ್ಫೋಟಕ ಇರಿಸಿದ್ದ. ಆರೋಪಿ ಮತ್ತು ಅಮಿತ್ ನಡುವೆ ನೀರು ಸರಬರಾಜು ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಹಳೆಯ ವಿವಾದವೊಂದಿದ್ದು ಈಗಾಗಲೇ ಇಬ್ಬರೂ ಪರಸ್ಪರರ ವಿರುದ್ಧ ಹಲವು ದೂರುಗಳನ್ನು ದಾಖಲಿಸಿದ್ದಾರೆ.

ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಆತನನ್ನು ವಹಿಸಲಾಗಿತ್ತು. ಆದರೆ ಶನಿವಾರ ರಾತ್ರಿ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹಾಗೂ ನಂತರ ವಾಂತಿ ಹಾಗೂ ಹೊಟ್ಟೆನೋವಿನಿಂದ ಬಳಲರಾಂಭಿಸಿದ್ದ ಎಂದು ವರದಿಯಾಗಿದೆ.

ಆತ ತನಿಖೆಗೆ ಸಹಕರಿಸಿಲ್ಲ, ತನಿಖೆಯ ದಾರಿತಪ್ಪಿಸಲು ಯತ್ನಿಸುತ್ತಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಆತ ನ್ಯಾಯಾಲಯದಲ್ಲಿ ಇರಿಸಿದ್ದ ಸುಧಾರಿತ ಸ್ಫೋಟಕ (ಐಇಡಿ) ಸಣ್ಣ ಪ್ರಮಾಣಧ ಸ್ಫೋಟವುಂಟು ಮಾಡಿದ್ದು ಕಾನ್‌ಸ್ಟೇಬಲ್ ರಾಜೀವ್ ಎಂಬವರು ಗಾಯಗೊಂಡಿದ್ದರು. ಐಇಡಿಯನ್ನು ಸರಿಯಾಗಿ ಅಸೆಂಬಲ್ ಮಾಡದೇ ಇದ್ದುದರಿಂದ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿಲ್ಲ.

ಆತ ವಕೀಲನ ಸೋಗಿನಲ್ಲಿ ನ್ಯಾಯಾಲಯ ಪ್ರವೇಶಿಸಿ ನಂತರ ಅಲ್ಲಿಂದ ತಪ್ಪಿಸಿಕೊಂಡಿದ್ದ. ಆದರೆ ಸ್ಫೋಟಕದೊಂದಿಗೆ ಆತ ಹೇಗೆ ಕೋರ್ಟ್ ಆವರಣದೊಳಗೆ ಪ್ರವೇಶಿಸಿದ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News