×
Ad

ಲೈಂಗಿಕ ಕಿರುಕುಳ ಪ್ರಕರಣ; ಆರೋಪಿ ವಕೀಲ ರಾಜೇಶ್ ಭಟ್ ಗೆ ನ್ಯಾಯಾಂಗ ಬಂಧನ

Update: 2021-12-20 17:50 IST
ರಾಜೇಶ್ ಭಟ್

ಮಂಗಳೂರು, ಡಿ.20: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಳೆದ ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಮಂಗಳೂರಿನ ನ್ಯಾಯಾಲಯಕ್ಕೆ ಶರಣಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮೂರನೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಂಜೆ 3 ಗಂಟೆಯ ವೇಳೆಗೆ ಶರಣಾಗಿದ್ದು, ಆತನ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವ ಕಾರಣ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನ ವಿರುದ್ಧ ಅ. 18ರಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು.

ಬಂಧನದ ಭೀತಿಯಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಈತನ ಪರ ವಕೀಲರು ಮಂಗಳೂರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ಅದು ತಿರಸ್ಕೃತಗೊಂಡಿತ್ತು. ಬಳಿಕ ಹೈಕೋರ್ಟ್‌ನಲ್ಲಿಯೂ ಆತನ ಪರ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದರೂ ಅಲ್ಲಿಯೂ ಜಾಮೀನು ತಿರಸ್ಕೃತಗೊಂಡಿತ್ತು. ಆತನಿಗೆ ಸಹಕಾರ ನೀಡಿದ ಆರೋಪದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಆರಂಭದಲ್ಲಿಯೇ ಪೊಲೀಸರು ಬಂಧಿಸಿದ್ದರು. ಬಳಿಕ ಆತನ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದ ಮಂಗಳೂರು ಪೊಲೀಸರು ಆತನ ಪತ್ತೆಗೆ ಲುಕ್‌ಔಟ್ ನೌಟೀಸು ಕೂಡ ಜಾರಿಗೊಳಿಸಿದ್ದರು. ಈ ಬಳಿಕ ಸಂತ್ರಸ್ತೆ ಹಾಗೂ ಆಕೆಯ ಬೆಂಬಲಿಗರಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದಾರೆಂಬ ಆರೋಪವೂ ವ್ಯಕ್ತವಾಗಿತ್ತು.

ಪೊಲೀಸರ ಕಣ್ಣು ತಪ್ಪಿಸಿಯೇ ಓಡಾಡಿಕೊಂಡಿದ್ದ ಆರೋಪಿ ರಾಜೇಶ್ ಭಟ್ ಪತ್ನಿ ಹಾಗೂ ಇನ್ನೋರ್ವ ಸಂಬಂಧಿಯನ್ನು ಇತ್ತೀಚೆಗೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಆದರೆ ರಾಜೇಶ್ ಭಟ್ ಪೊಲೀಸರ ಕೈಗೆ ಸಿಗದೆ ಇಂದು ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

‘‘ಆರೋಪಿ ಇಂದು ನ್ಯಾಯಾಲಯದ ಎದುರು ಹಾಜರಾಗಿರುವುದು ತಿಳಿದುಬಂದಿದೆ. ನ್ಯಾಯಾಲಯಕ್ಕೆ ಈ ಹಿಂದೆ ಜಾಮೀನು ಕೋರಿ ಹಾಕಿದ್ದ ಅರ್ಜಿ ತಿರಸ್ಕೃತಗೊಂಡಿರುವ ಕಾರಣ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೋರ್ವ ಸಹೋದ್ಯೋಗಿಗೆ ಕಿರುಕುಳ ಕುರಿತಂತೆ ಯಾವುದೇ ದೂರು ದಾಖಲಾಗಿಲ್ಲ. ಸಂತ್ರಸ್ತೆ ಯುವತಿ ಸಾಕಷ್ಟು ಆರೋಪ ಮಾಡಿರುವುದರಿಂದ ಆರೋಪಿಯನ್ನು ವಿಚಾರಣೆಗೊಳಪಡಿಸುವ ಅಗತ್ಯ ಇದೆ. ಹಾಗಾಗಿ ಈಗಾಗಲೇ ತನಿಖಾಧಿಕಾರಿಗೆ ಮತ್ತೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ತಿಳಿಸಲಾಗಿದೆ. ಆರೋಪಿ ಸಂಬಂಧಪಟ್ಟವರ ಜತೆ ಆ್ಯಂಬುಲೆನ್ಸ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿರುವುದಾಗಿ ನಮಗೆ ತಿಳಿದು ಬಂದಿದೆ. ಈ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ನ್ಯಾಯಾಲಯದಲ್ಲಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದಾಗ ಈ ಎಲ್ಲಾ ವಿಚಾರಗಳ ಕುರಿತಂತೆ ತನಿಖೆ ನಡೆಯಲಿದೆ.’’

ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News