×
Ad

ಆ್ಯಪ್ ಮೂಲಕ ಖರ್ಚು ರಹಿತ ಕಸಾಪ ಚುನಾವಣೆಗೆ ಚಿಂತನೆ: ಡಾ.ಮಹೇಶ್ ಜೋಶಿ

Update: 2021-12-20 19:59 IST

ಉಡುಪಿ, ಡಿ.20: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳು ಇನ್ನು ಮುಂದೆ ಖರ್ಚು ರಹಿತ ಹಾಗೂ ಪಾರದರ್ಶಕವಾಗಿ ನಡೆಯಲಿದೆ. ಅದಕ್ಕಾಗಿ ಅತ್ಯಾ ಧುನಿಕವಾದ ಆ್ಯಪ್ ರಚಿಸಲಾಗುವುದು. ಅದರಲ್ಲಿ ಓಟಿಪಿ ಮೂಲಕ ಮತ ಚಲಾಯಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ವತಿಯಿಂದ ಸೋಮವಾರ ಅಜ್ಜರಕಾಡು ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ನಮಗೆ ಸಂಕಟವಾಗುತ್ತಿವೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಕಸಾಪದಲ್ಲಿ ಅನೇಕ ನಿವೃತ್ತ ನ್ಯಾಯಾಮೂರ್ತಿಗಳಿದ್ದು, ಅವರೆಲ್ಲ ನಮಗೆ ಸಲಹೆ ಕೊಡುತ್ತಿದ್ದಾರೆ. ಈ ಪ್ರಕರಣದಲ್ಲಿ ಸಾಹಿತ್ಯ ಪರಿಷತ್ ಪಾಟಿ ಆಗುವ ಬಗ್ಗೆ ಚಿಂತನೆ ಕೂಡ ನಡೆಯು ತ್ತಿದೆ. ಇದರಿಂದ ಹೈಕೋರ್ಟ್‌ನಲ್ಲಿ ಕನ್ನಡ ಭಾಷೆ ರಕ್ಷಣೆಗೆ ಪರಿಷತ್ ಪ್ರಯತ್ನ ಮಾಡಲಿದೆ ಎಂದರು.

ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಶುಲ್ಕವನ್ನು 500ರೂ.ನಿಂದ 250ರೂ.ಗೆ ಇಳಿಕೆ ಮಾಡಲಾಗುವುದು. ಆ ಮೂಲಕ ಮುಂದಿನ ಐದು ವರ್ಷಗಳ ಅವಧಿ ಯಲ್ಲಿ ಪರಿಷತ್ತಿನ ಸದಸ್ಯರ ಸಂಖ್ಯೆಯನ್ನು ಈಗ ಇರುವ 3.40ಲಕ್ಷದಿಂದ ಕನಿಷ್ಠ ಒಂದು ಕೋಟಿಗೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವ ಬದಲು ಅತ್ಯಾಧುನಿಕವಾದ ಆ್ಯಪ್ ರಚಿಸಿ, ಆ ಮೂಲಕ ಸದಸ್ಯತ್ವವನ್ನು ಸ್ವೀಕರಿಸಲಾಗು ವುದು. ನಾನು ಸೇರಿದಂತೆ ಇನ್ನು ಮುಂದೆ ಒಂದು ಬಾರಿ ಮಾತ್ರ ರಾಜ್ಯಾಧ್ಯಕ್ಷ ರಾಗುವ ಬಗ್ಗೆಯೂ ನಿರ್ಧಾರ ಮಾಡಲಾಗಿದೆ. ಮುಂದೆ ತಾಲೂಕು ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಸುವ ನಿಟ್ಟಿನಲ್ಲಿ ತಿದ್ದುಪಡಿ ತರಲಾಗಿದೆ. ಅದೇ ರೀತಿ ಕಸಾಪವನ್ನು ಹೋಬಳಿ, ಗ್ರಾಮ ಮಟ್ಟಕ್ಕೂ ವಿಸ್ತರಿಸಲು ಯೋಜನೆ ರೂಪಿಸ ಲಾಗುತ್ತಿದೆ ಎಂದು ಅವರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸೇವಾ ಸ್ವೀಕರಿಸಿದರು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು.

ಉದ್ಯಮಿ ವಿಶ್ವನಾಥ ಶೆಣೈ ಉಡುಪಿ ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಒಂದು ಲಕ್ಷ ರೂ. ದೇಣಿಗೆಯನ್ನು ಇದೇ ಸಂದರ್ಭದಲ್ಲಿ ಘೋಷಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಸತೀಶ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News