ಡಾ.ವೈ.ಉಮಾನಾಥ ಶೆಣೈಗೆ ಪೊಳಲಿ ಶೀನಪ್ಪ ಹೆಗ್ಡೆ, ಎಸ್.ಆರ್.ಹೆಗ್ಡೆ ಪ್ರಶಸ್ತಿ
ಉಡುಪಿ, ಡಿ.20: ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ವೈ. ಉಮಾನಾಥ ಶೆಣೈ ಅವರು 2021ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಡೆ -ಎಸ್.ಆರ್. ಹೆಗ್ಡೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ ಇವರ ನೆನಪಿನಲ್ಲಿ ಉಡುಪಿ ಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿ ಯನ್ನು ನೀಡಲಾಗುತ್ತದೆ. ಪ್ರಶಸ್ತಿಯು 20,000ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಜ.1ರಂದು ನಡೆಯಲಿದೆ ಎಂದು ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಡಾ.ವೈ.ಉಮಾನಾಥ ಶೆಣೈ ಆರಂಭಿಕ ವಿದ್ಯಾಭ್ಯಾಸವನ್ನು ಪುತ್ತೂರಿನಲ್ಲಿ ಪೂರೈಸಿ, ಮೈಸೂರು ವಿವಿಯಿಂದ ಎಂ.ಎ. ಪದವಿ ಪಡೆದರು. ಬಳಿಕ ‘ಪರಿಸರ ಮತ್ತು ಧರ್ಮ-ಧರ್ಮಸ್ಥಳ ಒಂದು ಅಧ್ಯಯನ’ ಎಂಬ ವಿಷಯದ ಕುರಿತು ಹೆಚ್ಚಿನ ಅಧ್ಯಯನ ನಡೆಸಿ ಮೈಸೂರು ವಿವಿಯಿಂದ ಡಾಕ್ಟರೇಟ್ ಪಡೆದರು. ಮಂಗಳೂರು ವಿವಿ ಸ್ನಾತಕೋತ್ತರ ವಿಭಾಗ, ವಿವೇಕಾನಂದ ಕಾಲೇಜು ಪುತ್ತೂರು ಹಾಗೂ ಎಸ್.ವಿ.ಎಸ್.ಕಾಲೇಜು ಬಂಟ್ವಾಳದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಉಜಿರೆಯ ಎಸ್.ಡಿ ಎಂ.ಕಾಲೇಜಿನಲ್ಲಿ 2018ರವರೆಗೆ ಉಪನ್ಯಾಸಕರಾಗಿ ವೃ ತ್ತಿಜೀವನ ನಡೆಸಿ ನಿವೃತ್ತರಾದರು.
ಮೂರ್ತಿಶಿಲ್ಪ ಶಾಸ್ತ್ರ, ಶಾಸನಶಾಸ್ತ್ರ, ಪ್ರಾಕೃತ ತುಳುಲಿಪಿ ಮತ್ತು ಸಾಹಿತ್ಯ, ಜೈನಧರ್ಮ ಅವರ ಆಸಕ್ತಿಯ ಕ್ಷೇತ್ರಗಳು. ಅವರು 23ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. 100ಕ್ಕೂ ಹೆಚ್ಚು ಹೊಸ ಶಾಸನಗಳನ್ನು ಬೆಳಕಿಗೆ ತಂದಿದ್ದಾರೆ. 300ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ’ಸಿರಿ ಭೂವಲಯ’ ಎಂಬ ಗ್ರಂಥವನ್ನು ಇಂಗ್ಲಿಗೆ ಭಾಷಾಂತರಿಸಿದ್ದಾರೆ. ಅವರಿಗೆ ವಿಶ್ವಕೊಂಕಣಿ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾಪೀಠ ಸಾಹಿತ್ಯ ಪ್ರಶಸ್ತಿ ಸಂದಿವೆ ಎಂದು ಪ್ರಕಟಣೆ ತಿಳಿಸಿದೆ.