×
Ad

ದ.ಕ. ಜಿಲ್ಲೆಯಲ್ಲಿ ಒಮೈಕ್ರಾನ್ ಸೋಂಕು ಪತ್ತೆ; ಜಿಲ್ಲಾಡಳಿತಕ್ಕೆ ತಲೆನೋವಾದ ಸೋಂಕಿನ ಮೂಲ!

Update: 2021-12-20 22:18 IST
ಸಾಂದರ್ಭಿಕ ಚಿತ್ರ

ಮಂಗಳೂರು, ಡಿ. 20: ದ.ಕ. ಜಿಲ್ಲೆಯಲ್ಲಿ ರವಿವಾರ ಮತ್ತೆ ಒಂದು ಒಮೈಕ್ರಾನ್ ಪ್ರಕರಣ ಪತ್ತೆಯಾಗುವುದ ರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 6ಕ್ಕೇರಿದೆ. ಕೊರೋನ ರೂಪಾಂತರಿತ ಪ್ರಾಕಾರ ಎಂದು ಹೇಳಲಾಗುತ್ತಿ ರುವ ಒಮೈಕ್ರಾನ್ ಕಂಡು ಬಂದಿರುವ ಜಿಲ್ಲೆಯ ಸೋಂಕಿತರು ಯಾವುದೇ ವಿದೇಶ ಹಾಗೂ ಹೊರ ರಾಜ್ಯಗಳ ಪ್ರಯಾಣ ಇತಿಹಾಸವನ್ನು ಹೊಂದಿಲ್ಲ. ಮಾತ್ರವಲ್ಲದೆ ಅವರೆಲ್ಲರ ಕುಟುಂಬಿಕರೂ, ಪೋಷಕರು ಕೂಡಾ ಯಾವುದೇ ರೀತಿಯ ಅಂತಾರಾಷ್ಟ್ರೀಯ ಅಥವಾ ದೇಶೀ ಪ್ರಯಾಣ ಇತಿಹಾಸ ಹೊಂದಿಲ್ಲದೆಯೂ ಸೋಂಕು ತಗಲಿರುವುದು ಮೂಲ ಪತ್ತೆ ಕಾರ್ಯ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕೊರೋನಕ್ಕಿಂತ ಅತೀ ಸೌಮ್ಯ, ಯಾವುದೇ ರೋಗ ಲಕ್ಷಣವಿಲ್ಲದೆಯೂ ಕಂಡು ಬರುವ ಈ ಒಮೈಕ್ರಾನ್ ಅತೀ ಸೌಮ್ಯ ವೈರಸ್ ಎಂದು ಹೇಳಲಾಗುತ್ತಿದೆ. ಹಾಗಿದ್ದರೂ ಇದು ಕೊರೋನಕ್ಕಿಂತಲೂ ಅತ್ಯಂತ ಕ್ಷಿಪ್ರವಾಗಿ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮೂಲ ಪತ್ತೆ ಬಗ್ಗೆ ಈಗಾಗಲೇ ದ.ಕ. ಜಿಲ್ಲಾಡಳಿತ ಆರೋಗ್ಯ ಇಲಾಖೆಯ ಮೂಲಕ ಕ್ರಮಗಳನ್ನು ಕೈಗೊಂಡಿದೆ.

ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ಒಮೈಕ್ರಾನ್ ಪತ್ತೆಗಾಗಿ ಕೊರೋನ ಸೋಂಕಿತ 150 ಪ್ರಕರಣಗಳಲ್ಲಿ ಒಂದು ಪ್ರಕರಣವನ್ನು ಒಮೈಕ್ರಾನ್ ಪತ್ತೆಗಾಗಿ ಜೆನೊಮಿಕ್ ಸೀಕ್ವೆನ್ಸ್‌ಗೆ ಒಳಪಡಿಸಬೇಕಾಗಿದೆ. ಆದರೆ ದ.ಕ. ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ಡಿಸೆಂಬರ್ ಆರಂಭದಲ್ಲಿಯೇ ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಪತ್ತೆಯಾದ (ಒಂದೇ ಕಡೆ ಏಳಕ್ಕಿಂತ ಅಧಿಕ ಪ್ರಕರಣ) ಪ್ರದೇಶವನ್ನು ಕ್ಲಸ್ಟರ್ (ನಿಯಂತ್ರಿತ ವಲಯ) ಎಂಬುದಾಗಿ ಘೋಷಿಸಿ, 50 ಕೊರೋನ ಸೋಂಕಿತರಲ್ಲಿ ಒಬ್ಬರ ಗಂಟಲ ದ್ರವದ ಮಾದರಿಯನ್ನು ತಪಾಸಣೆಗಾಗಿ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ.

ಡಿಸೆಂಬರ್ ಪ್ರಥಮ ವಾರದಲ್ಲಿ ಜಿಲ್ಲೆಯಲ್ಲಿ ಎರಡು ಕ್ಲಸ್ಟರ್‌ಗಳನ್ನು ಘೋಷಿಸಲಾಗಿದ್ದು, ಒಂದು ಕ್ಲಸ್ಟರ್‌ನಲ್ಲಿ 16 ವರ್ಷದೊಳಗಿನವರೇ ಅಧಿಕ ಸಂಖ್ಯೆಯಲ್ಲಿದ್ದಾರೆನ್ನಲಾಗಿದೆ. ಇಲ್ಲಿನ 16 ಮಂದಿ ಸೋಂಕಿತರ ಗಂಟಲ ದ್ರವವನ್ನು ಡಿಸೆಂಬರ್ 10ರಂದು ಜೆನೊಮಿಕ್ ಸೀಕ್ವೆನ್ಸ್‌ಗಾಗಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ಡಿಸೆಂಬರ್ 18ರಂದು ಬಂದ ವರದಿಯ ಪ್ರಕಾರ 4 ಮಂದಿಯಲ್ಲಿ ಒಮೈಕ್ರಾನ್ ಸೋಂಕು ಪತ್ತೆಯಾಗಿತ್ತು. ನಗರ ಇನ್ನೊಂದು ಕ್ಲಸ್ಟರ್‌ನ 19 ಮಂದಿ ಕೊರೋನ ಸೋಂಕಿತ ಮಾದರಿಯನ್ನು ಜೆನೊಮಿಕ್ ಸೀಕ್ವೆನ್ಸ್‌ಗಾಗಿ ಕಳುಹಿಸಲಾಗಿದ್ದು, ಡಿ. 18ರಂದು ಬಂದ ವರದಿಯಲ್ಲಿ ಒಬ್ಬರಿಗೆ ಹಾಗೂ ಡಿ. 19 ರಂದು ಬಂದ ವರದಿಯಲ್ಲಿ ಒಬ್ಬರಿಗೆ ಒಮೈಕ್ರಾನ್ ಸೋಂಕು ಇರುವುದು ಪತ್ತೆಯಾಗಿದೆ.

ಒಮೈಕ್ರಾನ್ ಆಫ್ರಿಕಾ ಸೇರಿದಂತೆ ವಿದೇಶ ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ, ಹಡಗು ಯಾನದ ಮೇಲೆ ನಿಗಾ ಇರಿಸಲಾಗಿದೆ. ಕಟ್ಟುನಿಟ್ಟಿನ ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಇಂತಹ ಯಾವುದೇ ಅಂತಾರಾಷ್ಟ್ರೀಯ, ದೇಶದೊಳಗಿನ ಪ್ರಯಾಣ ಇತಿಹಾಸವನ್ನೇ ಹೊಂದರೆ, ಎರಡು ದಿನಗಳಲ್ಲಿ 6 ಮಂದಿಯಲ್ಲಿ ಒಮೈಕ್ರಾನ್ ಪತ್ತೆಯಾಗಿರುವುದು ಸಾಕಷ್ಟು ಮುಂಜಾಗೃತಾ ಕ್ರಮಗಳಿಗೂ ಎಡೆಮಾಡಿಕೊಟ್ಟಿದೆ.

ದ.ಕ. ಜಿಲ್ಲೆಗೆ ಬೇಕಿದೆ ಪ್ರಯೋಗಾಲಯ

ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಹೊಸ ಪ್ರಕರಣಗಳು ಪ್ರತಿನಿತ್ಯ ಅಂದಾಜು 10ರೊಳಗೆ ಪತ್ತೆಯಾಗುತ್ತಿತ್ತು. ಆದರೆ ಡಿ. 19ರಂದು 37 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ.

ಕೇರಳ, ಮಹಾರಾಷ್ಟ್ರದೊಂದಿಗೆ ಗಡಿಗಳನ್ನು ಹಂಚಿಕೊಂಡಿರುವ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರನ್ನೂ ಒಳಗೊಂಡಿರುವ ದ.ಕ. ಜಿಲ್ಲೆಯಲ್ಲಿ ಒಮೈಕ್ರಾನ್ ತಪಾಸಣಾ ಪ್ರಯೋಗಾಲಯದ ಅಗತ್ಯ ಕಂಡು ಬರುತ್ತಿದೆ. ಪ್ರಸ್ತುತ ಜೆನೊಮಿಕ್ ಸೀಕ್ವೆನ್ಸ್‌ಗಾಗಿ ಕೊರೋನ ಸೋಂಕಿತರ ಗಂಟಲ ದ್ರವದ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ.

ತಪಾಸಣಾ ವರದಿಗೆ ಒಂದು ವಾರ ಅವಧಿ ತಗಲುತ್ತಿದ್ದು, ಇದೀಗ ಜಿಲ್ಲೆಯಲ್ಲಿ ಯಾವುದೇ ಮೂಲದ ಹೊರತಾಗಿಯೂ ಒಮೈಕ್ರಾನ್ ಪತ್ತೆಯಾಗಿರುವುದು ಪ್ರಯೋಗಾಲಯದ ಅಗತ್ಯವನ್ನು ಹೆಚ್ಚಿಸಿದೆ. ಈಗಾಗಲೇ ಒಮೈಕ್ರಾನ್ ಪತ್ತೆಯಾಗಿರುವ ಪ್ರಕರಣಗಳಲ್ಲಿ ಸೋಂಕಿನ ಮೂಲ ಕಂಡು ಹಿಡಿಯಲು ಇನ್ನೂ ಸಾಧ್ಯವಾಗಿಲ್ಲದ ಕಾರಣ ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎನ್ನಲಾದ ಒಮೈಕ್ರಾನ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಗಮನ ವಹಿಸುತ್ತಿದೆ. ಅದರ ಜತೆಯಲ್ಲೇ ಪ್ರಯೋಗಾಲಯ ಮಂಗಳೂರಿನಲ್ಲಿಯೇ ಆರಂಭಗೊಳ್ಳುವ ಅಗ್ಯವಿದೆ.

ದ.ಕ. ಜಿಲ್ಲೆಯಲ್ಲಿ ಶನಿವಾರ ಐದು ಹಾಗೂ ರವಿವಾರ 1 ಒಮೈಕ್ರಾನ್ ವೈರಸ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಅಲರ್ಟ್ ಮಾಡಲಾಗಿದ್ದು ಟ್ರಾವೆಲ್ ಹಿಸ್ಟರಿ ಇಲ್ಲದೆ ಹೊಸ ವೈರಸ್ ಸೋಂಕು ಹೇಗೆ ಕಂಡು ಬಂದಿದೆ ಎಂಬ ಬಗ್ಗೆ ತಪಾಸಣೆ ನಡೆಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಈಗಾಗಲೇ ಸೋಂಕಿಗೆ ಒಳಗಾದವರು ಹಾಗೂ ಅವರ ಸಂಪರ್ಕಿತರನ್ನು ತಪಾಸಣೆಗೊಪಡಿಸ್ಲಿ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಶಾಲೆ, ಕಾಲೇಜು ಕ್ಯಾಂಪಸ್‌ಗಳಲ್ಲಿ ಇರುವ ಎಲ್ಲರ ಸ್ವಾಬ್ ಟೆಸ್ಟ್ ಮಾಡಲಾಗಿದೆ. ಅಲ್ಲದೆ, ಎಲ್ಲರ ಹಿಸ್ಟರಿ ಸಂಗ್ರಹಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ.

ನಿಯಮಾನುಸಾರ ಅಗತ್ಯ ಕ್ರಮಗಳನ್ನು ಮಾಡಲಾಗುತ್ತಿದೆ. ಒಮೈಕ್ರಾನ್ ವೇಗವಾಗಿ ಹರಡುವ ಕ್ಷಮತೆಯನ್ನು ಹೊಂದಿರುವುದಾಗಿ ವರದಿಯಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ದಾಖಲಾತಿ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಪ್ರಯೋಗಾಲಯದ ಅಗತ್ಯತೆ ಬಗ್ಗೆ ಮುಖ್ಯಮಂತ್ರಿ ಜತೆಗಿನ ಸಭೆಯಲ್ಲೂ ಸರಕಾರದ ಗಮನ ಸೆಳೆಯಲಾಗಿದೆ.

''ಈ ಬಗ್ಗೆ ಆರೋಗ್ಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರಟರಿ ಜತೆ ಮಾತುಕತೆ ವೇಳೆ ಮತ್ತೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ. ನಿಯಮದ ಪ್ರಕಾರ ಕೊರೋನ ಸೋಂಕಿತರಲ್ಲಿ 150 ಮಂದಿಯಲ್ಲಿ ಒಬ್ಬರಂತೆ ಜೆನೋಮಿಕ್ ಸೀಕ್ವೆನ್ಸ್ ತಪಾಸಣೆಗೊಳಡಿಸಬೇಕಿದೆ. ಕ್ಲಸ್ಟರ್‌ಗಳನ್ನು ಘೋಷಿಸಿರುವುದರಿಂದ ಅಲ್ಲಿನ ಪ್ರಕರಣಗಳನ್ನು ತಪಾಸಣೆಗೊಳಪಡಿಸುವಂತೆ ಹೇಳಿದ್ದರಿಂದ ಅದನ್ನು 50ರಲ್ಲಿ ಒಂದು ಪ್ರಕರಣವನ್ನು ಕಳುಹಿಸುತ್ತಿದ್ದೇವೆ. ಇದೀಗ ಎಲ್ಲಾ ಸಂಶಯಾಸ್ಪದ ಕೊರೋನ ಸೋಂಕಿತರ ವರದಿಯನ್ನು ಕಳುಹಿಸಲು ತೀರ್ಮಾನಿಸಲಾಗಿದೆ''.

- ಡಾ. ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News