×
Ad

ಫಿಲಿಪ್ಪೀನ್ಸ್: ಚಂಡಮಾರುತದಿಂದ ಮೃತರ ಸಂಖ್ಯೆ 208ಕ್ಕೆ ಏರಿಕೆ

Update: 2021-12-20 23:41 IST
photo:PTI

ಮನಿಲಾ, ಡಿ.20: : ಫಿಲಿಪ್ಪೀನ್ಸ್‌ನಲ್ಲಿ  ರಾಯ್ ಚಂಡಮಾರುತದ ಹಾವಳಿಯಿಂದ ಮೃತಪಟ್ಟವರ ಸಂಖ್ಯೆ 208ಕ್ಕೆ ಏರಿದ್ದು ಕರಾವಳಿ ಪ್ರದೇಶದಲ್ಲಿ ಅತ್ಯಧಿಕ ಹಾನಿ ಸಂಭವಿಸಿದ್ದು ಹಲವು ಮನೆ, ಶಾಲೆ, ಆಸ್ಪತ್ರೆಗಳು ಸಂಪೂರ್ಣ ಧ್ವಂಸವಾಗಿದೆ ಎಂದು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ. ‌

ಕಳೆದ ವಾರಾಂತ್ಯ ಕೇಂದ್ರ ಹಾಗೂ ದಕ್ಷಿಣದ ಪ್ರಾಂತಕ್ಕೆ ಅಪ್ಪಳಿಸಿದ ಭೀಕರ ಚಂಡಮಾರುತದಿಂದ ಕನಿಷ್ಟ 208 ಮಂದಿ ಮೃತಪಟ್ಟಿದ್ದು 52 ಮಂದಿ ನಾಪತ್ತೆಯಾಗಿದ್ದಾರೆ. ಕರಾವಳಿ ಪ್ರದೇಶದಲ್ಲಿ ಭಾರೀ ಹಾನಿ ಸಂಭವಿಸಿದೆ. ಹೆಚ್ಚಿನ ಸಾವು ದೇಶದ ಅತ್ಯಂತ ಜನಪ್ರಿಯ ಪ್ರವಾಸೀ ತಾಣಗಳನ್ನು ಹೊಂದಿರುವ ಬೊಹೊಲ್ ಪ್ರಾಂತ, ಸೆಂಟ್ರಲ್ ವಿಸಾಯಸ್ ಪ್ರದೇಶದಲ್ಲಿ ಸಂಭವಿಸಿದ್ದು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು ಅತ್ಯಧಿಕ ವಿಪತ್ತು ಸಂಭವಿಸಿರುವ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸವಾಲು ಎದುರಾಗಿದೆ ಎಂದು ಪೊಲೀಸ್ ವಕ್ತಾರ ರಾಡ್ರಿಕ್ ಅಲ್ಬಾ ಹೇಳಿದ್ದಾರೆ.

ಟೆಲಿಫೋನ್ ಸಂಪರ್ಕ ಜಾಲ ಮತ್ತು ವಿದ್ಯುತ್ ಪೂರೈಕೆ ಜಾಲ ಸಂಪೂರ್ಣ ಹಾನಿಗೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದ್ದು ಕೆಬು, ಲೈಟೆ ಮತ್ತು ಸುರಿಗಾವೊ ಡೆಲ್ ನಾರ್ಟೆ ಪ್ರಾಂತದಲ್ಲಿ ವ್ಯಾಪಕ ಹಾನಿಯಾಗಿದೆ. ಚಂಡಮಾರುತದಿಂದಾಗಿ ಸುಮಾರು 4,90,000 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ಇದೀಗ ಚಂಡಮಾರುತ ದಕ್ಷಿಣ ಚೀನಾ ಸಮುದ್ರದತ್ತ ಸಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚಂಡಮಾರುತದಿಂದ ಉಂಟಾದ ಭಾರೀ ಪ್ರವಾಹದಿಂದಾಗಿ ಹಲವರು ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದು ಆಹಾರ ಮತ್ತು ನೀರಿಗೆ ಪರದಾಡುವಂತಾಗಿದೆ.

ಈ ಮಧ್ಯೆ, ಚಂಡಮಾರುತದ ಪರಿಸ್ಥಿತಿಯನ್ನು ಸರಕಾರ ಸೂಕ್ತವಾಗಿ ನಿರ್ವಹಿಸಿಲ್ಲ. ಮುನ್ನೆಚ್ಚರಿಕೆ ಇದ್ದರೂ ಪೂರ್ವಸಿದ್ಧತೆ ಮಾಡಿಕೊಳ್ಳಲು ಸರಕಾರ ವಿಫಲವಾಗಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News