ವಾಯು ರಕ್ಷಣಾ ಕವಾಯತು ನಡೆಸಿದ ಇರಾನ್

Update: 2021-12-20 18:19 GMT

ಟೆಹ್ರಾನ್, ಡಿ.20: ದೇಶದ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಉದ್ವಿಗ್ನತೆ ಮುಂದುವರಿದಿರುವಂತೆಯೇ ನೈಋತ್ಯದ ಬಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಸಮೀಪದಲ್ಲಿ ಹಾಗೂ ಪರ್ಶಿಯನ್ ಕೊಲ್ಲಿಯ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಇರಾನ್ ವಾಯು ರಕ್ಷಣಾ ಕವಾಯತು ನಡೆಸಿದೆ ಎಂದು ವರದಿಯಾಗಿದೆ.

ಇರಾನ್ ಹಾಗೂ ವಿಶ್ವದ ಇತರ ಶಕ್ತದೇಶಗಳ ನಡುವಿನ 2015ರ ಪರಮಾಣು ಒಪ್ಪಂದದ ಮರುಸ್ಥಾಪನೆಗಾಗಿ ವಿಯೆನ್ನಾದಲ್ಲಿ ನಡೆದ ಮಾತುಕತೆಯಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಮಾತ್ರ ಸಾಧ್ಯವಾಗಿರುವಂತೆಯೇ, ಇರಾನ್ ತನ್ನ ವಾಯುರಕ್ಷಣೆಯ ತಾಲೀಮನ್ನು ಆರಂಭಿಸಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮಕ್ಕೆ ಕಡಿವಾಣ ಹಾಕಿದರೆ ಆ ದೇಶದ ಮೇಲೆ ವಿಧಿಸಿರುವ ನಿರ್ಬಂಧವನ್ನು ಸಡಿಲಗೊಳಿಸುವ ಒಪ್ಪಂದಕ್ಕೆ ಇಸ್ರೇಲ್ ತೀವ್ರ ವಿರೋಧ ಸೂಚಿಸಿದ್ದು ಇರಾನ್‌ನ  ಪರಮಾಣು ಸ್ಥಾವರಗಳ ಮೇಲೆ ನೇರ ಸೇನಾ ಕಾರ್ಯಾಚರಣೆ ನಡೆಸುವ ಎಚ್ಚರಿಕೆ ನೀಡಿದೆ. ವಿಯೆನ್ನಾ ಸಭೆಗೆ ಭಂಗ ತರುವ ಉದ್ದೇಶದಿಂದ ಇರಾನ್‌ನ  ಮೇಲೆ ಇಸ್ರೇಲ್ ಆಕ್ರಮಣ ನಡೆಸುವ ಸಾಧ್ಯತೆಯಿದೆ ಎಂದು ಕಳೆದ ವಾರ ಇರಾನ್‌ನ  ನೂರ್‌ನ್ಯೂಸ್ ಮಾಧ್ಯಮ ವರದಿ ಮಾಡಿದೆ.

ಅಮೆರಿಕದ ಅನುಮೋದನೆ ಇಲ್ಲದೆ ಇಸ್ರೇಲ್ ಆಕ್ರಮಣ ಮಾಡದು. ಒಂದು ವೇಳೆ ಇಸ್ರೇಲ್ ಆಕ್ರಮಣ ಮಾಡಿದರೆ ಆಕ್ರಮಣ ಹಿಮ್ಮೆಟ್ಟಿಸುವ ಜತೆಗೆ, ಆಕ್ರಮಣದ ಮೂಲವನ್ನು ಗುರುತಿಸಿ ಅಲ್ಲಿದೇ ದಾಳಿ ನಡೆಸುವ ಸಾಮರ್ಥ್ಯವನ್ನು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ಸ್ ಕಾರ್ಪ್ಸ್ ಹೊಂದಿದೆ ಎಂದು ಸೋಮವಾರ ಸೇನಾಮುಖಂಡ ಘೊಲಾಮಿ ರಶೀದ್ ಹೇಳಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.

2020 ಮತ್ತು 2021ರಲ್ಲಿ ನತಾಂರ್ ಪ್ರಾಂತದಲ್ಲಿರುವ ಇರಾನ್ನ ಪ್ರಮುಖ ಪರಮಾಣು ಸ್ಥಾವರದ ಮೇಲೆ ವಿಧ್ವಂಸಕ ದಾಳಿ ನಡೆದಿದ್ದು ಇದಕ್ಕೆ ಇಸ್ರೇಲ್ ಹೊಣೆ ಎಂದು ಇರಾನ್ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News