ಅಮೆರಿಕದಲ್ಲಿ ಒಮೈಕ್ರಾನ್ ಸೋಂಕು ಹೆಚ್ಚಳ

Update: 2021-12-21 02:17 GMT
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಹೊಸದಾಗಿ ಬೆಳಕಿಗೆ ಬರುತ್ತಿರುವ ಕೋವಿಡ್-19 ಪ್ರಕರಣಗಳ ಪೈಕಿ ಶೇಕಡ 73.2ರಷ್ಟು ಒಮೈಕ್ರಾನ್ ಪ್ರಬೇಧದ ಕೋವಿಡ್ ಸೋಂಕು ಆಗಿದೆ. ದೇಶದಲ್ಲಿ ಹೀಗೆ ಅಧಿಕೃತವಾಗಿ ಒಮೈಕ್ರಾನ್ ಪ್ರಬೇಧ ಅತ್ಯಂತ ಪ್ರಮುಖ ಪ್ರಬೇಧವಾಗಿ ಹೊರಹೊಮ್ಮಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಕಲೆ ಹಾಕಿದ ಅಂಕಿ ಅಂಶಗಳ ಪ್ರಕಾರ, ಶನಿವಾರ ಕೊನೆಗೊಂಡ ಒಂದು ವಾರದ ಅವಧಿಯಲ್ಲಿ ಒಟ್ಟು ಪ್ರಕರಣಗಳ ಪೈಕಿ ಶೇಕಡ 73.2 ರಷ್ಟು ಒಮೈಕ್ರಾನ್ ಪ್ರಕರಣಗಳಾಗಿವೆ. ಹಿಂದಿನ ವಾರ ಈ ಪ್ರಮಾಣ ಕೇವಲ 12.6ರಷ್ಟಿತ್ತು.

ಫೆಸಿಫಿಕ್ ಈಶಾನ್ಯ ಮತ್ತು ದಕ್ಷಿಣ ಅಮೆರಿಕ ಹಾಗೂ ಮಧ್ಯಪ್ರಾಚ್ಯ ಭಾಗಗಳಲ್ಲಿ ಒಮೈಕ್ರಾನ್ ಪ್ರಕರಣಗಳು ಒಟ್ಟು ಹೊಸ ಪ್ರಕರಣಗಳ ಶೇಕಡ 90ರಷ್ಟಿವೆ ಎಂದು ಸಿಡಿಸಿ ಹೇಳಿದೆ.

ಅಧ್ಯಕ್ಷ ಜೋ ಬೈಡನ್ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ದೇಶದಲ್ಲಿ ಲಾಕ್‌ಡೌನ್ ಹೇರುವ ಚಿಂತನೆ ಇಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶ ಜೆನ್ ಸಕಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಹೊಸ ಅಂಶ ಬೆಳಕಿಗೆ ಬಂದಿದೆ.

ಚಳಿಗಾಲದಲ್ಲಿ ವಿಶ್ವಾದ್ಯಂತ ಒಮೈಕ್ರಾನ್ ಪ್ರಬೇಧ, ಕೋವಿಡ್-19 ಸಾಂಕ್ರಾಮಿಕದ ಹೊಸ ಅಲೆಗೆ ಕಾರಣವಾಗಲಿದೆ ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ಸಲಹೆಗಾರ ಅಂತೋನಿ ಫ್ಯೂಸಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News