ಪಿಎ ಇಂಜಿನಿಯರಿಂಗ್ ಕಾಲೇಜು ಅಧ್ಯಕ್ಷ, ಉದ್ಯಮಿ ಡಾ.ಪಿ.ಎ.ಇಬ್ರಾಹೀಂ ಹಾಜಿ ನಿಧನ
ಮಂಗಳೂರು, ಡಿ.21: ನಗರ ಹೊರವಲಯದ ನಡುಪದವಿನಲ್ಲಿರುವ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ, ಉದ್ಯಮಿ ಡಾ.ಪಿ.ಎ.ಇಬ್ರಾಹೀಂ ಹಾಜಿ(78) ಮಂಗಳವಾರ ಬೆಳಗ್ಗೆ ಕೇರಳದ ಕ್ಯಾಲಿಕೆಟ್ ನಲ್ಲಿ ನಿಧನರಾಗಿದ್ದಾರೆ.
ಮೂಲತಃ ಕಾಸರಗೋಡಿನ ಪಳ್ಳಿಕೆರೆ ನಿವಾಸಿಯಾಗಿದ್ದ ಇವರು 1943ರ ಸೆಪ್ಟಂಬರ್ 6ರಂದು ಜನಿಸಿದ್ದರು. ಮಲಬಾರ್ ಗೋಲ್ಡ್ ಗ್ರೂಪ್ ನ ಕೋ ಚೆಯರ್ ಮ್ಯಾನ್ ಆಗಿದ್ದ ಡಾ.ಪಿ.ಎ.ಇಬ್ರಾಹೀಂ ಹಾಜಿ ಶಿಕ್ಷಣ ಪ್ರೇಮಿಯಾಗಿದ್ದರು. ಮಂಗಳೂರಿನಲ್ಲಿ ಪಿ.ಎ. ಎಜ್ಯುಕೇಶನಲ್ ಟ್ರಸ್ಟ್, ದುಬೈಯ ಅಜ್ಮಾನ್ ನಲ್ಲಿ ದಿಲ್ಲಿ ಪ್ರೈವೇಟ್ ಸ್ಕೂಲ್ ಸಹಿತ ಹಲವು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದ್ದ ಪಿಎ ಇಬ್ರಾಹೀಂ ಹಾಜಿಯ ಸೇವೆಯನ್ನು ಪರಿಗಣಿಸಿ 'ಪ್ರವಾಸಿ ರತ್ನ', ಸಿ.ಎಚ್. ಅವಾರ್ಡ್ ಸಹಿತ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ಕೆಲವು ತಿಂಗಳ ಹಿಂದೆ ದುಬೈಗೆ ತೆರಳಿದ್ದ ವೇಳೆ ಅನಾರೋಗ್ಯಕ್ಕೀಡಾಗಿದ್ದ ಅವರು ದುಬೈಯಲ್ಲೇ ಚಿಕಿತ್ಸೆಗೊಳಗಾಗಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ಊರಿಗೆ ಕರೆ ತರಲಾಗಿತ್ತು.