×
Ad

ಮಂಗಳೂರು: ಕಾರಿಂಜೇಶ್ವರ ದೇವಳ ಪರಿಸರದಲ್ಲಿ ಗಣಿಗಾರಿಕೆ ನಿಲ್ಲಿಸಲು ಒತ್ತಾಯಿಸಿ ಹಿಂಜಾವೇ ಧರಣಿ

Update: 2021-12-21 13:07 IST

ಮಂಗಳೂರು, ಡಿ.21: ಬಂಟ್ವಾಳ ತಾಲೂಕು ಕಾರಿಂಜದ ಕಾರಿಂಜೇಶ್ವರ ದೇವಳ ಪರಿಸರದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗದ ವತಿಯಿಂದ ಇಂದು ನಗರದ ಕ್ಲಾಕ್ ಟವರ್ ಬಳಿ ಧರಣಿ ನಡೆಯಿತು.

ಕಾರಿಂಜ ಕ್ಷೇತ್ರ ಸುತ್ತಲು ನಡೆಯುತ್ತಿರುವ ಗಣಿಗಾರಿಕೆ ಅಕ್ರಮ. ಇಲ್ಲಿ ನಡೆಯುವ ಎಲ್ಲ ರೀತಿಯ ಗಣಿಗಾರಿಕೆ ಶಾಶ್ವತವಾಗಿ ನಿಲ್ಲಿಸಬೇಕು, ಕ್ಷೇತ್ರದ ಪಾವಿತ್ರ್ಯತೆ ರಕ್ಷಿಸಬೇಕು ಎಂದು ಒತ್ತಾಯಿಸಿ ತಿಂಗಳ ಹಿಂದೆ ರುದ್ರಗಿರಿಯ ರಣಕಹಳೆ ಎಂಬ ಹೋರಾಟ ನಡೆಸಿ, ಗಣಿಗಾರಿಕೆ ನಿಲ್ಲಿಸಲು ಒಂದು ತಿಂಗಳ ಗಡುವು ನೀಡಲಾಗಿತ್ತು. ಆದರೆ ಹೋರಾಟಕ್ಕೆ ಸ್ಪಂದನ ಸಿಗದಿರುವ ಇಂದು ಧರಣಿ ಹಮ್ಮಿಕೊಂಡಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.

  ಕಾರಿಂಜ ಕ್ಷೇತ್ರದ ಸುತ್ತಲೂ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ದೇವಳದ ಆವರಣ ಗೋಡೆ ಕುಸಿದು ಬಿದ್ದಿದೆ, ಗರ್ಭಗುಡಿಯ ಮುಂಭಾಗ ಬಿರುಕು ಬಿಟ್ಟಿದೆ. ಭೋಜನಶಾಲೆಯ ಮೇಲ್ಛಾವಣಿ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ನೀರು ಸೋರುತ್ತಿದೆ. ಘನ ಸ್ಫೋಟದಲ್ಲಿ ಕಾರಿಂಜ ಬೆಟ್ಟಕ್ಕೆ ಹಾನಿಯಾಗುತ್ತಿದೆ. ಇದರಿಂದಾಗಿ ದೇವಾಲಯದ ಅಸ್ತಿತ್ವಕ್ಕೆ ಅಪಾಯ ಉಂಟಾಗಿದೆ. ಆದರೂ, ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಡಳಿತ, ಸಂಬಂಧಿಸಿದ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಧರಣಿನಿರತರು ಆರೋಪಿಸಿದರು.

ಕಾರಿಂಜೇಶ್ವರ ಕ್ಷೇತ್ರದ ಪರಿಸರದಲ್ಲಿ ನಡೆಯುವ ಎಲ್ಲ ರೀತಿಯ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಸಬೇಕು, ಕ್ಷೇತ್ರದ 10 ಕಿ.ಮೀ. ವ್ಯಾಪ್ತಿಯನ್ನು ಧಾರ್ಮಿಕ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಬೇಕು, ಕ್ಷೇತ್ರದಲ್ಲಿ ಯಾವುದೇ ಅಹಿತಕರ ಚಟುವಟಿಕೆ ನಡೆಯದಂತೆ ಕ್ರಮ ಕೈಗೊಳ್ಳಬೇಕು, ಅಕ್ರಮ ಗಣಿಗಾರಿಕೆ, ಗೋಮಾಳದ ಅತಿಕ್ರಮಣ, ಅರಣ್ಯ ಲೂಟಿ ಮಾಡಿದವರನ್ನು, ಅದಕ್ಕೆ ಬೆಂಬಲ ನೀಡಿದವರನ್ನು ಬಂಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ಗುರುಪುರ ರಾಜಶೇಖರನಂದ ಸ್ವಾಮೀಜಿ ಧರಣಿಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News