×
Ad

ಫೆ.10ರಿಂದ ಮಾರ್ಚ್ 6ರವರೆಗೆ ಉಳ್ಳಾಲ ಉರೂಸ್ : ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್

Update: 2021-12-21 17:05 IST

ಉಳ್ಳಾಲ: ಕೊರೋನ ಭೀತಿ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಎರಡು ತಿಂಗಳು ಮುಂದೂಡಲ್ಪಟ್ಟ ಉಳ್ಳಾಲ ದರ್ಗಾ ಉರೂಸ್ ಕಾರ್ಯಕ್ರಮದ ದಿನಾಂಕ ನಿಗದಿ ಮಾಡಲಾಗಿದೆ.

ಫೆ.10 ರಿಂದ ಮಾರ್ಚ್ 6ರವರೆಗೆ ಉಳ್ಳಾಲ ದರ್ಗಾ ಉರೂಸ್ ನಡೆಸಲು ತೀರ್ಮಾನಿಸಲಾಗಿದೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್  ತಿಳಿಸಿದ್ದಾರೆ.

2020ರಲ್ಲಿ ನಡೆಯಬೇಕಾಗಿದ್ದ ಉಳ್ಳಾಲ ಉರೂಸ್ ಕೊರೋನ ಕಾರಣದಿಂದ ಮುಂದೂಡಲ್ಪಟ್ಟು ಡಿ.23 ರಿಂದ ಜ.16ವರೆಗೆ ನಡೆಸಲು ದರ್ಗಾ ಆಡಳಿತ ಸಮಿತಿ ತೀರ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಸ್ಥಳ ಪರಿಶೀಲನೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕೂಡಾ ನಡೆದಿತ್ತು. ಉಳ್ಳಾಲ ನಗರ ಸಭೆ ಉರೂಸ್ ಪ್ರಯುಕ್ತ ಅಭಿವೃದ್ಧಿ ಕಾಮಗಾರಿಗಳಿಗೆ ಒಂದು ಕೋಟಿ ರೂ.ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ನೀಡಿತ್ತು. ಉರೂಸ್ ಗೆ ಸಕಲ ಸಿದ್ಧತೆ ನಡೆಯುತ್ತಿದ್ದಂತೆ ಕೆಲವು ಕಡೆ ಒಮೈಕ್ರೊನ್  ಸೋಂಕು ಪತ್ತೆ ಆದ ಕಾರಣ ಜಿಲ್ಲಾಡಳಿತ ಎರಡು ತಿಂಗಳ ಕಾಲ ಉರೂಸ್ ಕಾರ್ಯಕ್ರಮ ಮುಂದೂಡುವಂತೆ ದರ್ಗಾ ಆಡಳಿತ ಸಮಿತಿಗೆ ಸೂಚಿಸಿತ್ತು. ಇದಕ್ಕೆ ಸಹಮತ ವ್ಯಕ್ತಪಡಿಸಿದ ದರ್ಗಾ ಆಡಳಿತ ಸಮಿತಿ ಡಿಸೆಂಬರ್ ತಿಂಗಳಲ್ಲಿ ನಿಗದಿಯಾಗಿದ್ದ ಉರೂಸ್ ಕಾರ್ಯಕ್ರಮ ವನ್ನು ಎರಡು ತಿಂಗಳ ಕಾಲ ಮುಂದೂಡಿತ್ತು.

ಆದರೆ ಉರೂಸ್ ಗಾಗಿ ನಡೆಯುತ್ತಿದ್ದ ಕಾಮಗಾರಿ ಮುಂದುವರಿದಿದೆ. ದರ್ಗಾ ಮುಂಭಾಗದಲ್ಲಿ ಅಚ್ಚುಕಟ್ಟಾದ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಫೆ.10 ರಿಂದ ಮಾರ್ಚ್ 6 ವರೆಗೆ ಉರೂಸ್ ಕಾರ್ಯಕ್ರಮ ಜಿಪ್ರಿ ತಂಙಳ್  ಹಾಗೂ ಎ.ಪಿ. ಉಸ್ತಾದ್ ರವರ ನೇತೃತ್ವದಲ್ಲಿ ನಡೆಯಲಿದ್ದು, ಈ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News