ಈಜಿಪ್ಟ್: ಮಾನವ ಹಕ್ಕು ಹೋರಾಟಗಾರ ಅಬ್ದುಲ್ ಫತಾಹ್‌ಗೆ ಜೈಲುಶಿಕ್ಷೆ
ಕೈರೊ, ಡಿ.21: ಸುಳ್ಳು ಸುದ್ಧಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಈಜಿಪ್ಟ್‌ನ ಪ್ರಮುಖ ಮಾನವ ಹಕ್ಕು ಹೋರಾಟಗಾರ ಅಲಾ ಅಬ್ದುಲ್ ಫತಾಹ್‌ಗೆ 5 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಇದೇ ಅಪರಾಧಕ್ಕೆ ಬ್ಲಾಗ್ ಬರಹಗಾರ ಮುಹಮ್ಮದ್ ಇಬ್ರಾಹಿಂ ಮತ್ತು ನ್ಯಾಯವಾದಿ ಮುಹಮ್ಮದ್ ಎಲ್ ಬಾಖರ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯದ ಮೂಲಗಳು ವರದಿ ಮಾಡಿವೆ.
ಈ ಮೂವರೂ 2019ರ ಸೆಪ್ಟಂಬರ್‌ನಿಂದ ಬಂಧನದಲ್ಲಿದ್ದಾರೆ. 3 ದಶಕಗಳಿಂದ ಅಧಿಕಾರದಲ್ಲಿದ್ದ ಅಧ್ಯಕ್ಷ ಹೊಸ್ನಿ ಮುಬಾರಕ್‌ರನ್ನು 2011ರಲ್ಲಿ ಪದಚ್ಯುತಗೊಳಿಸಿದ ಜನಾಂದೋಲನದಲ್ಲಿ ಅಬ್ದುಲ್ ಫತಾಹ್ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. 2014ರಲ್ಲಿ ಫತಾಹ್‌ರನ್ನು ಬಂಧಿಸಿ 5 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಖೈದಿಗಳನ್ನು ಬಂಧಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದ ಅಬ್ದುಲ್ ಫತಾಹ್ ಸಹೋದರಿ ಸನಾ ಸಯಿಫ್‌ಗೆ ಮಾರ್ಚ್‌ನಲ್ಲಿ ಒಂದೂವರೆ ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಪತ್ರಕರ್ತರು ಮತ್ತು ಮಾನವ ಹಕ್ಕು ಹೋರಾಟಗಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ತೀರ್ಪಿನಿಂದ ಅಮೆರಿಕಕ್ಕೆ ನಿರಾಶೆಯಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ನೆಡ್ ಪ್ರೈಸ್ ಪ್ರತಿಕ್ರಿಯಿಸಿದ್ದಾರೆ.