ಚೀನಾದ ಪ್ರತೀಕಾರ ಕ್ರಮ ಅಮೆರಿಕ ಅಧಿಕಾರಿಗಳಿಗೆ ನಿರ್ಬಂಧ

Update: 2021-12-21 18:27 GMT

ಬೀಜಿಂಗ್, ಡಿ.21: ಚೀನಾದ ಕ್ಸಿನ್‌ಜಿಯಾಂಗ್ ವಲಯದಲ್ಲಿ ವ್ಯಾಪಕ ಮಾನವಹಕ್ಕು ಉಲ್ಲಂಘನೆಯ ಆರೋಪದಲ್ಲಿ ಚೀನಾದ ಅಧಿಕಾರಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿರುವುದಕ್ಕೆ ಪ್ರತಿಯಾಗಿ ಅಮೆರಿಕದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ 4 ಸದಸ್ಯರ ವಿರುದ್ಧ ನಿರ್ಬಂಧ ಜಾರಿಗೊಳಿಸಿರುವುದಾಗಿ ಚೀನಾ ಮಂಗಳವಾರ ಘೋಷಿಸಿದೆ.

ಆಯೋಗದ ಅಧ್ಯಕ್ಷೆ ನ್ಯಾಡಿನ್ ಮಯೆಂಝಾ, ಉಪಾಧ್ಯಕ್ಷ ನ್ಯೂರಿ ಟರ್ಕೆಲ್ , ಸದಸ್ಯರಾದ ಜೇಮ್ಸ್ ಕಾರ್ ಮತ್ತು ಅನುರಿಮಾ ಭಾರ್ಗವ ಮೈನ್‌ಲ್ಯಾಂಡ್ ಚೀನಾ , ಹಾಂಕಾಂಗ್ ಮತ್ತು ಮಕಾವು ಪ್ರದೇಶಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ ಹಾಗೂ ಅವರು ಚೀನಾದಲ್ಲಿ ಯಾವುದಾದರೂ ಆಸ್ತಿಯನ್ನು ಹೊಂದಿದ್ದರೆ ಅದನ್ನು ಸ್ಥಂಭನಗೊಳಿಸಲಾಗುವುದು ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಝಾವೊ ಲಿಜಿಯನ್ ಹೇಳಿದ್ದಾರೆ.

ತಥಾಕಥಿತ ನಿರ್ಬಂಧ ಕ್ರಮಗಳನ್ನು ಅಮೆರಿಕ ತಕ್ಷಣ ಹಿಂಪಡೆಯಬೇಕು ಮತ್ತು ಕ್ಸಿನ್‌ಜಿಯಾಂಗ್‌ನ ವ್ಯವಹಾರ ಹಾಗೂ ಚೀನಾದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸಬೇಕು. ಪರಿಸ್ಥಿತಿಯ ಬೆಳವಣಿಗೆಯನ್ನು ಗಮನಿಸಿ ಅದಕ್ಕೆ ತಕ್ಕಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.

ಏಟಿಗೆ ಎದಿರೇಟು ಎಂಬ ರೀತಿಯ ಕ್ರಮದಿಂದ ಉಭಯ ದೇಶಗಳ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಜೀತದಾಳುಗಳಿಂದ ತಯಾರಿಸಲ್ಪಟ್ಟಿರಬಹುದಾದ ವಸ್ತುಗಳ ಆಮದಿಗೆ ನಿಷೇಧ ಹೇರುವುದಾಗಿ ಅಮೆರಿಕ ಡಿಸೆಂಬರ್ 10ರಂದು ಘೋಷಿಸಿತ್ತು. ಅಲ್ಲದೆ ಬೀಜಿಂಗ್‌ನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ ಕೂಟವನ್ನು ಬಹಿಷ್ಕರಿಸಬೇಕೆಂದು ಮಾನವಹಕ್ಕು ಕಾರ್ಯಕರ್ತರು ಆಗ್ರಹಿಸಿದ್ದರು. ಈ ಆರೋಪವನ್ನು ನಿರಾಕರಿಸಿದ್ದ ಚೀನಾ, ವಿದೇಶಿ ಶೂ ಹಾಗೂ ಬಟ್ಟೆಗಳ ಬಹಿಷ್ಕಾರಕ್ಕೆ ಕರೆ ನೀಡಿತ್ತು. ಅಲ್ಲದೆ ಇನ್ನಷ್ಟು ಪ್ರತೀಕಾರ ಕ್ರಮದ ಎಚ್ಚರಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News