ಕೆನಡಾ: ವಿದೇಶ ವ್ಯವಹಾರ ಸಚಿವೆಗೆ ಸೋಂಕು ದೃಢ; ಕೊರೋನ ಪ್ರಕರಣ ಉಲ್ಬಣ

Update: 2021-12-21 18:38 GMT
ಸಾಂದರ್ಭಿಕ ಚಿತ್ರ

ಒಟ್ಟಾವ, ಡಿ.21: ಕೆನಡಾದಲ್ಲಿ ಕೊರೋನ ಸೋಂಕು ಪ್ರಕರಣ ಏಕಾಏಕಿ ಹೆಚ್ಚಿದ್ದು ಸೋಮವಾರ ಒಂದೇ ದಿನ 10,000ಕ್ಕೂ ಅಧಿಕ ಹೊಸ ಸೋಂಕು ಪ್ರಕರಣ ದಾಖಲಾಗಿದೆ. ಈ ಮಧ್ಯೆ , ತನಗೆ ಸೋಂಕು ತಗುಲಿರುವುದನ್ನು ವಿದೇಶ ವ್ಯವಹಾರ ಸಚಿವೆ ಮೆಲಾನಿ ಜೋಲಿ ಸೋಮವಾರ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.

ಸಾರ್ವಜನಿಕ ಸುರಕ್ಷಾ ಮಾರ್ಗಸೂಚಿಯನ್ನು ಪಾಲಿಸುತ್ತಿದ್ದು ಈಗ ಮನೆಯಲ್ಲೇ ಕ್ವಾರಂಟೈನ್ ಆಗಿದ್ದು ವರ್ಚುವಲ್ ವೇದಿಕೆ ಮೂಲಕ ಕಚೇರಿ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ. ಲಸಿಕೆಯಿಂದ ನಮಗೆ ದೊರಕುವ ಸುರಕ್ಷತೆ ಬಗ್ಗೆ ಅಭಾರಿಯಾಗಿದ್ದು, ಈ ರಜಾದಿನದ ಅವಧಿಯಲ್ಲಿ ಮತ್ತು ಇತರ ದಿನದಲ್ಲೂ ನಮ್ಮ ಕುಟುಂಬವನ್ನು ಸುರಕ್ಷಿತವಾಗಿಡುವ ಉತ್ತಮ ವಿಧಾನವೆಂದರೆ ಲಸಿಕೆ ಪಡೆಯುವುದಾಗಿದೆ ಎಂದು 42 ವರ್ಷದ ಜೋಲಿ ಟ್ವೀಟ್ ಮಾಡಿದ್ದಾರೆ. ಕೆನಡಾದಲ್ಲಿ ಹಠಾತ್ತನೆ ಕೊರೋನ ಸೋಂಕು ಪ್ರಕರಣ ಹೆಚ್ಚಿದ್ದು ಇದು ಹೊಸ ರೂಪಾಂತರ ಪ್ರಬೇಧದ ಪ್ರಕರಣವೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ದೇಶದಲ್ಲಿ 10,621 ಹೊಸ ಪ್ರಕರಣ ದಾಖಲಾಗಿದ್ದು ಹಲವು ರಾಜ್ಯಗಳು ಕೊರೋನ ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸಿವೆ. ಕ್ವಿಬೆಕ್ ಪ್ರಾಂತದಲ್ಲಿ ಸೋಮವಾರದಿಂದ ಸಿನೆಮ ಥಿಯೇಟರ್, ಬಾರ್, ಜಿಮ್ ಮತ್ತು ಶಾಲೆಗಳನ್ನು ಮುಚ್ಚಲಾಗಿದೆ. ಹೋಟೆಲ್‌ಗಳಲ್ಲಿ 50% ಗ್ರಾಹಕರಿಗೆ ಮಾತ್ರ ಅವಕಾಶವಿದೆ. ಕ್ವಿಬೆಕ್‌ನಲ್ಲಿ ಸೋಮವಾರ ಒಂದೇ ದಿನ 4,571 ಹೊಸ ಸೋಂಕಿನ ಪ್ರಕರಣ ದಾಖಲಾಗಿದೆ.

ಹಲವು ಸ್ಥಳಗಳಲ್ಲಿ ಸೋಂಕಿನ ಪ್ರಕರಣ ಕ್ರಿಪ್ರವಾಗಿ ಹೆಚ್ಚುತ್ತಿರುವುದರಿಂದ ತಮ್ಮ ಸುರಕ್ಷತೆಯ ಬಗ್ಗೆ ಕುಟುಂಬದವರೇ ಉತ್ತಮ ನಿರ್ಧಾರ ಕೈಗೊಳ್ಳಬೇಕಿದೆ. ಸಾಧ್ಯವಾದಷ್ಟು ಮನೆಯೊಳಗೇ ಇರಲು ಪ್ರಯತ್ನಿಸಬೇಕು ಮತ್ತು ಲಸಿಕೆ ಪಡೆಯುವುದನ್ನು ಮರೆಯಬಾರದು ಎಂದು ಕೆನಡಾದ ಮುಖ್ಯ ಆರೋಗ್ಯಾಧಿಕಾರಿ ಡಾ. ಥೆರೆಸಾ ಟ್ಯಾಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News