×
Ad

ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

Update: 2021-12-22 19:35 IST

ಉಡುಪಿ, ಡಿ.22: ಖ್ಯಾತ ಚಿತ್ರ ಕಲಾವಿದ ಪಿ. ಎನ್. ಆಚಾರ್ಯರ ಸಮಗ್ರ ಚಿತ್ರ ಸಂಪುಟವನ್ನು ಗ್ರಂಥರೂಪದಲ್ಲಿ ಪ್ರಕಟಿಸುವ ಯೋಜನೆಯನ್ನು ಪಿ.ಎನ್. ಆಚಾರ್ಯ ಅಭಿಮಾನಿ ಬಳಗ ರೂಪಿಸಿದ್ದು, ಯೋಜನೆಯ ಅಂಗವಾಗಿ ವಿಶ್ವಬ್ರಾಹ್ಮಣ ಸಮುದಾಯದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ‘ಪ್ರೇರಣಾ ಜಲವರ್ಣ ಚಿತ್ರಸ್ಪರ್ಧೆ’ಯನ್ನು ಏರ್ಪಡಿಸಲಾಗಿದೆ.

ಚಿತ್ರ ಸ್ಪರ್ಧೆಯು ಡಿಸೆಂಬರ್ 25ರ ಶನಿವಾರದಂದು ಉಡುಪಿ ಕೊಡಂಕೂರಿನ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದಲ್ಲಿ ಅಪರಾಹ್ನ 2 ಗಂಟೆಗೆ ಜರಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಬದುಕಿನ ಮೇಲೆ ಪ್ರಭಾವ ಬೀರಿದ, ತಮ್ಮ ವ್ಯಕ್ತಿತ್ವ ರೂಪಿಸಲು ಪ್ರೇರಕರಾದ ವಿಶ್ವಬ್ರಾಹ್ಮಣ ಸಮುದಾಯದ ಸಮಾಜ ಸೇವಕ/ ಸಾಧಕರ ಭಾವಚಿತ್ರವನ್ನು ಎರಡು ಗಂಟೆಗಳ ಅವಧಿಯಲ್ಲಿ ಸ್ಥಳದಲ್ಲಿ ಬಿಡಿಸಬೇಕು. ತಾವು ಬಿಡಿಸಲಿರುವ ಸಮಾಜ ಸೇವಕ/ ಸಾಧಕರ ಭಾವಚಿತ್ರವನ್ನು ಹಾಗೂ ಚಿತ್ರ ಬಿಡಿಸಲು ಬೇಕಾದ ವರ್ಣ ಪರಿಕರಗಳನ್ನು ತಾವೇ ತೆಗೆದುಕೊಂಡು ಬರಬೇಕು. ಕಾಗದವನ್ನು ಸಂಘಟಕರು ಒದಗಿಸಲಿದ್ದಾರೆ.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ. 5,000, ದ್ವಿತೀಯ ಸ್ಥಾನ ವಿಜೇತರಿಗೆ ರೂ. 3,000 ಹಾಗೂ ತೃತೀಯ ಸ್ಥಾನಿಗೆ ರೂ. 2,000 ಬಹುಮಾನ ವನ್ನು ನೀಡಲಾಗುವುದು. ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯು ಅಪರಾಹ್ನ 2ರಿಂದ 4 ಗಂಟೆಯರೆಗೆ ನಡೆಯಲಿದೆ.

ಬಳಿಕ ಕಲಾವಿದ ಪಿ.ಎನ್.ಆಚಾರ್ಯರಿಂದ ವಿದ್ಯಾರ್ಥಿಗಳಿಗಾಗಿ ಒಂದು ಗಂಟೆ ಅವಧಿಯ ಚಿತ್ರ ರಚನೆಯ ಮಾರ್ಗದರ್ಶನ- ಪ್ರಾತ್ಯಕ್ಷಿಕೆಯು ಜರಗಲಿದೆ. ವಿಶ್ವಬ್ರಾಹ್ಮಣ ಸಮುದಾಯದ ಆಸಕ್ತ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ವಿದ್ಯಾರ್ಥಿ ಗಳು ಶಾಲಾ ದಾಖಲೆಯೊಂದಿಗೆ ಡಿ.24ರೊಳಗೆ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಅಭಿಮಾನಿ ಬಳಗದ ಪ್ರಧಾನ ಸಂಚಾಲಕರಾದ ಅಲೆವೂರು ಯೋಗೀಶ ಆಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ: 9844738909.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News