ರಾಮಕುಂಜ: ಶ್ರೀವಿಶ್ವೇಶತೀರ್ಥ ಸ್ಮಾರಕ ಧ್ಯಾನಕೇಂದ್ರ ಲೋಕಾರ್ಪಣೆ
ಉಡುಪಿ, ಡಿ.22: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ದಶಕಗಳ ಹಿಂದೆ ಪದ್ಮವಿಭೂಷಣ ಪುರಸ್ಕೃತ ಯತಿಗಳಾದ ಪೇಜಾವರ ಮಠದ ದಿ.ಶ್ರೀವಿಶ್ವೇಶತೀರ್ಥರಿಂದ ಸ್ಥಾಪಿಸಲ್ಪಟ್ಟ ಶ್ರೀರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಆವರಣದಲ್ಲಿ ಸ್ಥಾಪಿಸಲಾದ ಶ್ರೀವಿಶ್ವೇಶತೀರ್ಥರ ಪುತ್ಥಳಿ ಮತ್ತು ಅವರ ಸಂಸ್ಮರಣಾರ್ಥ ನಿರ್ಮಿಸಲಾಗಿರುವ ಧ್ಯಾನಕೇಂದ್ರದ ಲೋಕಾರ್ಪಣೆ ಬುಧವಾರ ನೆರವೇರಿತು.
ಉಡುಪಿಯ ಶ್ರೀಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೂ ಅದಮಾರು ಮಠದ ಹಿರಿಯ ಯತಿಗಳೂ ಆಗಿರುವ ಶ್ರೀವಿಶ್ವಪ್ರಿಯ ತೀರ್ಥರು ಪುತ್ಥಳಿ ಅನಾವರಣಗೊಳಿಸಿ ಧ್ಯಾನಕೇಂದ್ರವನ್ನು ಉದ್ಘಾಟಿಸಿದರು.
ಪೇಜಾವರ ಮಠದ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥರು, ಮಠದ ದಿವಾನರಾದ ಎಂ ರಘುರಾಮಾಚಾರ್ಯ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ತೀರಾ ಹಿಂದುಳಿದ ಗ್ರಾಮೀಣ ಪ್ರದೇಶವಾಗಿರುವ ರಾಮಕುಂಜದಲ್ಲಿ ಶ್ರೀಗಳು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಈ ಹಳ್ಳಿ ಪ್ರದೇಶದ ಅಸಂಖ್ಯ ಬಡಮಕ್ಕಳಿಗೆ ಪ್ರಾಥಮಿಕದಿಂದ ಪ್ರೌಢ, ಪದವಿಪೂರ್ವ ಹಾಗೂ ಪದವಿವರೆಗಿನ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದ್ದು, ಪ್ರಸ್ತುತ ಇಲ್ಲಿ ಎರಡೂವರೆ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.