×
Ad

ಕನಕದಾಸರ ಚಿಂತನೆಗಳು ಇಂದೂ ಪ್ರಸ್ತುತ: ಡಾ. ರವಿರಾಜ್ ಶೆಟ್ಟಿ

Update: 2021-12-22 20:48 IST

ಉಡುಪಿ, ಡಿ.22: ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಕನಕದಾಸರು ಒಂದು ಮೈಲುಗಲ್ಲಾದ ಸಾಧಕ ಪುರುಷ. ಕನಕರ ಬದುಕು ಬರಹ ಆಧುನಿಕ ಕಾಲಘಟ್ಟ ದಲ್ಲಿ ಭಿನ್ನ ಭಿನ್ನ ಕಾರಣಗಳಿಗಾಗಿ ಅತಿ ಹೆಚ್ಚು ಸಂವಾದ, ಚಿಂತನೆ ಹಾಗೂ ಹೊಸ ಹೊಸ ಓದುಗಳಿಗೆ ತೆರೆದುಕೊಂಡಿದೆ. ಕನಕದಾಸರು ಸಮನ್ವತೆಯ ಹರಿಕಾರ ರಾಗಿದ್ದು ಇಂದಿಗೂ ಅವರ ಚಿಂತನೆಗಳು ಪ್ರಸ್ತುತವಾಗಿವೆ ಎಂದು ಡಾ.ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ ಹೇಳಿದ್ದಾರೆ.

ಮಾಹೆಯ ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೆಬ್ರಿ ಇವರ ಸಹಯೋಗದೊಂದಿಗೆ ಹೆಬ್ರಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಲಾದ ವಿಸ್ತರಣಾ ಉಪನ್ಯಾಸ ಮಾಲಿಕೆ ಯ ಐದನೆ ಉಪನ್ಯಾಸ ‘ಕನಕದಾಸರ ಮೋಹನತರಂಗಿಣಿಯಲ್ಲಿ ದೇವದಾನವ ಸಮನ್ವಯತೆ’ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

ವಚನ ಸಾಹಿತ್ಯದ ನಂತರ ಭಕ್ತಿ ಪಂಗಡದ ಒಂದು ಪ್ರಧಾನ ಭಾಗವಾಗಿ ಮೂಡಿಬಂದ ದಾಸ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದವರು ಕನಕರು. ಕನಕದಾಸರದ್ದು ಬಹುರೂಪಿ ವ್ಯಕ್ತಿತ್ವ. ಅದರಲ್ಲಿಯೂ ಎಲ್ಲವನ್ನೂ ಮೀರುವ ಲೋಕಕ್ಕೆ ಹತ್ತಿರವಾಗುವ ಚರೆಗಳು ಕನಕರಲ್ಲಿವೆ ಎಂದರು.

ಕನಕರನ್ನು ವಿಶ್ವಮಾನವ, ಭಕ್ತಿ ಕವಿ, ನೊಂದವರ ದನಿ, ಸಂತಕವಿ, ದಾರ್ಶನಿಕ ಹೀಗೆಅವರ ವ್ಯಕ್ತಿತ್ವ ಪ್ರಭಾವಲಯ.ಅದರಲ್ಲೂ ದಂಧ್ವಮನಸ್ಥಿತಿ, ಬಹುಮುಖತೆ- ಸಾಮಾಜಿಕ ಕಾಳಜಿ-ಸಂತನ ಹೊಯ್ದಿಟ ನಮ್ಮನ್ನು ಮತ್ತೆ ಮತ್ತೆ ಕಾಡುವಂತೆ ಮಾಡುತ್ತದೆ. ಇತರರಿಗಿಂತ ಭಿನ್ನವಾದ ಸಾಮಾಜಿಕತೆಯ ಸಮನ್ವಯದ ವ್ಯಕ್ತಿತ್ವ ಕನಕದಾಸದ್ದು ಎಂದು ಡಾ.ಶೆಟ್ಟಿ ನುಡಿದರು.

ಮಾಹೆಯ ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸಾದ್ ರಾವ್ ಎಂ. ವಹಿಸಿದ್ದರು. ಗೋವಿಂದ ಪೈ ಸಂಶೋಧನ ಕೇಂದ್ರದ ಗ್ರಂಥಪಾಲಕ ವೆಂಕಟೇಶ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರವೀಣ ಕುಮಾರ್ ಎಸ್ ಸ್ವಾಗತಿಸಿದರು. ಅಕ್ಷಿತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ರಚನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News