×
Ad

ಪಾತಾಳ ವೆಂಕಟ್ರಮಣ ಭಟ್ಟರಿಗೆ ಯಕ್ಷಾಂಗಣ ಪ್ರಶಸ್ತಿ ಪ್ರದಾನ

Update: 2021-12-22 22:05 IST

ಮಂಗಳೂರು, ಡಿ.22: ಕರ್ನಾಟಕ ರಾಜ್ಯ ಹಲವಾರು ಪ್ರಾದೇಶಿಕ, ಜಾನಪದ ಹಾಗೂ ಲಲಿತ ಕಲೆಗಳ ಆಗರ. ಅವುಗಳಲ್ಲಿ ನಮ್ಮ ಕಣ್ಣು ಮತ್ತು ಕಿವಿಗಳಿಗೆ ಅದ್ಭುತರಮ್ಯ ಅನುಭವ ನೀಡುವ ಯಕ್ಷಗಾನ ರಾಜ್ಯದ ಶ್ರೇಷ್ಠ ಕಲೆಯಾಗಿದೆ. ಅದರ ಜನಪ್ರಿಯತೆಯಲ್ಲಿ ಕಲಾವಿದರು ಹಾಗೂ ಕಲಾ ಸಂಘಟನೆಗಳು ಮಹತ್ತರ ಪಾತ್ರವಹಿಸಿವೆ’ ಎಂದು ಮಾಜಿ ಸಚಿವ ಮತ್ತು ವಿಕಾಸ್ ಕಾಲೇಜಿನ ಸ್ಥಾಪಕಾಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಹೇಳಿದ್ದಾರೆ.

'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದಲ್ಲಿ ಮಂಗಳೂರು ವಿ.ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಿದ ಎರಡು ದಿನಗಳ 'ಯಕ್ಷಗಾನ ತಾಳಮದ್ದಳೆ ಪರ್ವ’ 9ನೇ ವರ್ಷದ ನುಡಿಹಬ್ಬ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಸ್ತ್ರೀವೇಷಧಾರಿ 88ರ ಹರೆಯದ ಱಯಕ್ಷ ಶಾಂತಲಾ’ ಬಿರುದಾಂಕಿತ ಪಾತಾಳ ವೆಂಕಟ್ರಮಣ ಭಟ್ಟರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿಯನ್ನು ಅವರು ಪ್ರದಾನ ಮಾಡಿದರು. ಅಲ್ಲದೆ ಪುರುಷೋತ್ತಮ ಪ್ರಸಂಗ, ಪದ್ಯಾಣ ಪ್ರಣತಿ ಹಾಗೂ ದಿ. ಬೆಟ್ಟಂಪಾಡಿ ಬಾಳಪ್ಪಶೆಟ್ಟಿ ಸಂಸ್ಮರಣೆಯೂ ಜರಗಿತು.

ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ಕೆನರಾ ಬ್ಯಾಂಕ್ ವಲಯ ಮುಖ್ಯಸ್ಥರು ಹಾಗೂ ಪ್ರಧಾನ ವ್ಯವಸ್ಥಾಪಕ ಯೋಗೀಶ್ ಆಚಾರ್ಯ ಅತಿಥಿಯಾಗಿದ್ದರು.

ಕಾರ್ಯಕ್ರಮದಲ್ಲಿ ಪೂಂಜ-ಪದ್ಯಾಣ ಸಂಸ್ಮರಣೆಯನ್ನು ಮಂಗಳೂರು ವಿ.ವಿ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಶ್ರೀಪತಿ ಕಲ್ಲೂರಾಯ ನೆರವೇರಿಸಿದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ರಾಜ್ಯ ಅಲೆಮಾರಿ ಆಯೋಗದ ರವೀಂದ್ರ ಶೆಟ್ಟಿ, ವಿವಿ ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಬೆಟ್ಟಂಪಾಡಿ ಬಾಳಪ್ಪಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ, ದಿ.ಪುರುಷೋತ್ತಮ ಪೂಂಜರ ಪತ್ನಿ ಶೋಭಾ ಪೂಂಜಾ, ದಿ.ಪದ್ಯಾಣ ಗಣಪತಿ ಭಟ್ಟರ ಪುತ್ರ ಸ್ವಸ್ತಿಕ್ ಪದ್ಯಾಣ ಉಪಸ್ಥಿತರಿದ್ದರು.

ಯಕ್ಷಾಂಗಣ ಮಂಗಳೂರು ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಸಂಚಾಲಕ ಲಕ್ಷ್ಮಿನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಉಮೇಶ್ ಆಚಾರ್ಯ ಗೇರುಕಟ್ಟೆ ವಂದಿಸಿದರು. ಪದಾಧಿಕಾರಿಗಳಾದ ಸುಧಾಕರ ರಾವ್ ಪೇಜಾವರ, ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಕೃಷ್ಣಪ್ಪಗೌಡ ಪಡ್ಡಂಬೈಲ್, ಸಿದ್ದಾರ್ಥ ಅಜ್ರಿ, ನಿವೇದಿತಾ ಎನ್.ಶೆಟ್ಟಿ ಮತ್ತು ಸುಮಾ ಪ್ರಸಾದ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News