ಓಪೊ, ಶವೋಮಿ, ಒನ್‌ ಪ್ಲಸ್‌ ಸಹಿತ ಚೀನಾದ ಮೊಬೈಲ್ ಕಂಪೆನಿಗಳ ಮೇಲೆ ಐಟಿ ದಾಳಿ

Update: 2021-12-22 16:50 GMT

ಹೊಸದಿಲ್ಲಿ, ಡಿ. 22: ಚೀನಾದ ಪ್ರಮುಖ ಮೊಬೈಲ್ ತಯಾರಿಕಾ ಕಂಪೆನಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದ್ದು, ಮಂಗಳವಾರ ದೇಶಾದ್ಯಂತ ಶೋಧ ಕಾರ್ಯ ನಡೆಸಿದೆ. ಮೊಬೈಲ್ ಫೋನ್ ತಯಾರಿಕಾ ಕಂಪೆನಿಗಳಾದ ಓಪೊ, ಶವೋಮಿ, ಒನ್‌ ಪ್ಲಸ್‌ ವಿರುದ್ಧ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಈ ಕಂಪೆನಿಗಳ ದೇಶಾದ್ಯಂತವಿರುವ ಎರಡು ಡಝನ್ಗೂ ಅಧಿಕ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ. "ದಿಲ್ಲಿ, ಮುಂಬೈ, ಬೆಂಗಳೂರು, ಗ್ರೇಟರ್ ನೋಯ್ಡ, ಕೋಲ್ಕತ, ಗುವಾಹತಿ, ಇಂದೋರ್ ಮತ್ತುಇತರ ಕೆಲವು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ’’ ಎಂದು ಮೂಲಗಳು ತಿಳಿಸಿವೆ. ಕೆಲವು ಫಿನ್ಟೆಕ್ ಕಂಪೆನಿಗಳ ಮೇಲೂ ದಾಳಿ ನಡೆಸಲಾಗುತ್ತಿದೆ.

ಈ ಕಂಪೆನಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ ಅವರ ವಿಚಾರಣೆಯನ್ನು ಆದಾಯತೆರಿಗೆ ಅಧಿಕಾರಿಗಳು ನಡೆಸುತ್ತಿದ್ದಾರೆ. ಚೀನಾದ ಈ ಮೊಬೈಲ್ ತಯಾರಿಕಾ ಕಂಪೆನಿಗಳು ಭಾರೀ ಪ್ರಮಾಣದಲ್ಲಿ ತೆರಿಗೆ ವಂಚನೆ ನಡೆಸಿವೆ ಎಂಬ ಗುಪ್ತಚರ ಮಾಹಿತಿಗಳ ಆಧಾರದಲ್ಲಿ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಕಂಪೆನಿಗಳ ಮೇಲೆ ತುಂಬಾ ಸಮಯದಿಂದ ನಿಗಾ ಇಡಲಾಗಿತ್ತು ಹಾಗೂ ಅಧಿಕಾರಿಗಳಿಗೆ ಗಟ್ಟಿ ಪುರಾವೆಗಳು ದೊರೆತ ಬಳಿಕ ದಾಳಿ ನಡೆಸಲಾಗಿದೆಎಂದು ಮೂಲಗಳು ತಿಳಿಸಿವೆ.

ತೆರಿಗೆ ವಂಚನೆಯನ್ನು ಸೂಚಿಸುವ ಸಾಕಷ್ಟು ಪ್ರಮಾಣದ ಡಿಜಿಟಲ್ ಮಾಹಿತಿ ಪುರಾವೆಯನ್ನು ಸಂಗ್ರಹಿಸಲಾಗಿದೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News