ಬೂಸ್ಟರ್ ಡೋಸ್ ಪ್ರಸ್ತಾವ ತಿರಸ್ಕರಿಸಿದ ಕೇಂದ್ರ ಸರ್ಕಾರ

Update: 2021-12-23 02:53 GMT

ಮುಂಬೈ: ಒಮೈಕ್ರಾನ್ ಪ್ರಬೇಧದ ಸೋಂಕು ದೇಶದಲ್ಲಿ ಹೆಚ್ಚುತ್ತಿದ್ದರೂ, ದೇಶದಲ್ಲಿ ಕೋವಿಡ್-19 ವಿರುದ್ಧದ ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ನೀಡುವ ಸಂಬಂಧ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಬಯೋಲಾಜಿಕಲ್ ಇ ಸಲ್ಲಿಸಿದ್ದ ಪ್ರತ್ಯೇಕ ಪ್ರಸ್ತಾವನೆಗಳನ್ನು ಆರೋಗ್ಯ ಸಚಿವಾಲಯದ ತಜ್ಞರ ಸಮಿತಿ ತಿರಸ್ಕರಿಸಿದೆ.

ಪರೀಕ್ಷಾರ್ಥ ಪ್ರಯೋಗಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ಇಲ್ಲ ಎಂಬ ಕಾರಣ ನೀಡಿ ಪ್ರಸ್ತಾವನೆ ತಿರಸ್ಕರಿಸಲಾಗಿದೆ.

ಅಂತೆಯೇ ಬಯಲಾಜಿಕಲ್ ಇ ಅಭಿವೃದ್ಧಿಪಡಿಸಿರುವ ಕಾರ್ಬ್‌ವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲು ಕೂಡಾ ಹೊಸ ಲಸಿಕೆಗಳು ಮತ್ತು ಹೊಸ ಔಷಧಿಗಳ ಬಗ್ಗೆ ದೇಶದ ಔಷಧ ನಿಯಂತ್ರಣ ಸಂಸ್ಥೆಗೆ ಸಲಹೆ ನೀಡುವ ವಿಷಯ ಸಲಹಾ ಸಮಿತಿ (ಎಸ್‌ಇಸಿ) ನಿರಾಕರಿಸಿದೆ. ಸುರಕ್ಷತೆ ಮತ್ತು ಇತರ ಮಾನದಂಡಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಎಸ್‌ಇಸಿ ಕೇಳಿದೆ. ಇದು ಈ ಲಸಿಕೆ ಬಿಡುಗಡೆಯ ವಿಳಂಬಕ್ಕೆ ಕಾರಣವಾಗಲಿದೆ.

ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕಾರ್ಬ್‌ವ್ಯಾಕ್ಸ್ ಲಸಿಕೆಯನ್ನು ಬೂಸ್ಟರ್ ಡೋಸ್ ನೀಡಲು ಬಳಸುವ ಬಗ್ಗೆ ಬಯಲಾಜಿಕಲ್ ಇ ಸಲ್ಲಿಸಿದ ಅರ್ಜಿಯನ್ನು ಚರ್ಚೆಗೆ ಎತ್ತಿಕೊಂಡ ಎಸ್‌ಇಸಿ, ಕಂಪನಿ ಪರಿಷ್ಕೃತ ಕ್ಲಿನಿಕಲ್ ಟ್ರಯಲ್ ಶಿಷ್ಟಾಚಾರದ ಅಂಕಿ ಅಂಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ಮೂರನೇ ಹಂತದ ಪರೀಕ್ಷಾರ್ಥ ಪ್ರಯೋಗದ ಸುರಕ್ಷಾ ಮತ್ತು ಕ್ಷಮತೆಯ ಅಂಕಿ ಅಂಶಗಳನ್ನು ಮೌಲ್ಯಮಾಪನ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ. ಲಸಿಕೆಯ ಸುರಕ್ಷತೆ ಹಾಗೂ ಪ್ರತಿರೋಧಶಕ್ತಿ ಬಗೆಗಿನ ಸಮಗ್ರ ಮಾಹಿತಿ ಒದಗಿಸುವಂತೆ ಸಲಹೆ ಮಾಡಿದೆ. ಇದರ ಜತೆಗೆ ಪ್ರಸ್ತಾವಿಸಲಾದ ವಯೋಮಿತಿಗೆ ಸಮರ್ಥನೆ, ಬೂಸ್ಟರ್ ಶಾಟ್‌ನ ಅವಧಿ ಮತ್ತು ಮಾದರಿ ಗಾತ್ರದ ಬಗೆಗೂ ಸಮರ್ಥನೆ ಒದಗಿಸುವಂತೆ ಸೂಚಿಸಲಾಗಿದೆ.

ಅಂತೆಯೇ ಕೋವಿಶೀಲ್ಡ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡುವ ಬಗೆಗೆ ಕ್ಷಮತೆ ವರದಿಯನ್ನು ನೀಡುವಂತೆ ಎಸ್‌ಐಐಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News