ಅಯೋಧ್ಯೆಯಲ್ಲಿ ಬಿಜೆಪಿ ನಾಯಕರಿಂದ ಭೂ ಕಬಳಿಕೆ ಆರೋಪ: ತನಿಖೆಗೆ ಆದೇಶಿಸಿದ ಉತ್ತರಪ್ರದೇಶ
ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಬಳಿ ಬಿಜೆಪಿ ನಾಯಕರು ಹಾಗೂ ಸರಕಾರಿ ಅಧಿಕಾರಿಗಳ ಸಂಬಂಧಿಕರು ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿರುವ ವರದಿಗಳ ಕುರಿತು ಉತ್ತರ ಪ್ರದೇಶ ಸರಕಾರ ತನಿಖೆಗೆ ಆದೇಶಿಸಿದೆ.
ಈ ಕುರಿತು ಕೂಲಂಕುಷವಾಗಿ ತನಿಖೆ ನಡೆಸುವಂತೆ ಕಂದಾಯ ಇಲಾಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ ಎಂದು ಮಾಹಿತಿ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಪಿಟಿಐಗೆ ತಿಳಿಸಿದ್ದಾರೆ.
"ಹಿಂದುತ್ವವು ಧರ್ಮದ ಸೋಗಿನಲ್ಲಿ ದರೋಡೆ ಮಾಡುತ್ತದೆ" ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
"ಹಿಂದೂ ಸತ್ಯದ ಮಾರ್ಗವನ್ನು ಅನುಸರಿಸುತ್ತದೆ, ಹಿಂದುತ್ವವು ಧರ್ಮದ ಸೋಗಿನಲ್ಲಿ ದರೋಡೆ ಮಾಡುತ್ತದೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ ರಾಹುಲ್ ಗಾಂಧಿ ಅವರು, ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ಬಳಿಕ ಅಯೋಧ್ಯೆಯಲ್ಲಿ ಶಾಸಕರು, ಮೇಯರ್‌ಗಳು, ಆಯುಕ್ತರ ಸಂಬಂಧಿಕರು, ಎಸ್‌ಡಿಎಂ ಮತ್ತು ಡಿಐಜಿ ಭೂಮಿ ಖರೀದಿಸಿದ್ದಾರೆ ಎಂಬ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ವಿಷಯ ಪ್ರಸ್ತಾಪಿಸಲು ಯತ್ನಿಸಿದರಾದರೂ ಅವರು ಮಾತನಾಡಲು ನಿಲ್ಲುತ್ತಿದ್ದಂತೆಯೇ ಸದನವನ್ನು ಮುಂದೂಡಲಾಯಿತು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಇದನ್ನು ‘ಭೂ ಹಗರಣ’ ಎಂದು ಕರೆದಿದ್ದಾರೆ, "ಬಿಜೆಪಿಗೆ ಸಂಪರ್ಕ ಹೊಂದಿದ ಜನರು ಅಯೋಧ್ಯೆ ನಗರದೊಳಗೆ ಭೂಮಿಯನ್ನು ಬಹಿರಂಗವಾಗಿ ಲೂಟಿ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
"ಗೌರವಾನ್ವಿತ ಮೋದಿಜಿ, ಈ ಬಹಿರಂಗ ಲೂಟಿಯ ಬಗ್ಗೆ ನೀವು ಯಾವಾಗ ಬಾಯಿ ತೆರೆಯುತ್ತೀರಿ? ಕಾಂಗ್ರೆಸ್ ಪಕ್ಷ, ದೇಶದ ಜನತೆ ಹಾಗೂ ರಾಮಭಕ್ತರು ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದು ದೇಶದ್ರೋಹವಲ್ಲವೇ? ಇದು ದೇಶದ್ರೋಹಕ್ಕಿಂತ ಕಡಿಮೆಯೇ? ಬಿಜೆಪಿ ಈಗ ಅಯೋಧ್ಯೆಯಲ್ಲಿ 'ಅಂಧರ್ ನಗರಿ, ಚೌಪಟ್ ರಾಜಾ' ವ್ಯವಹಾರ ನಡೆಸುತ್ತಿದೆ'' ಎಂದು ಸುದ್ದಿಗಾರರಿಗೆ ಸುರ್ಜೇವಾಲಾ ತಿಳಿಸಿದರು.