ಡಿ.26: ಗಾಂಧಿ ವಿಚಾರ ವೇದಿಕೆಯಿಂದ ಪಾಣಾಜೆಯಲ್ಲಿ ಗಾಂಧಿ ಗ್ರಾಮ ಸಂವಾದ
ಪುತ್ತೂರು, ಡಿ.23: ಗಾಂಧೀಜಿ ಅವರ ತತ್ವ ಮತ್ತು ಚಿಂತನೆಯನ್ನು ಪರಿಚಯಿಸುವ ಉದ್ದೇಶದಿಂದ ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕದ ವತಿಯಿಂದ ಡಿ.26ರಂದು ಪಾಣಾಜೆ ಆರ್ಲಪದವು ಶ್ರೀ ದುರ್ಗಾ ಸಭಾಭವನದಲ್ಲಿ ಗಾಂಧಿ ಗ್ರಾಮ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ಝೇವಿಯರ್ ಡಿಸೋಜ ತಿಳಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಬೆಳಗ್ಗೆ 8:30ಕ್ಕೆ ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯರಿಂದ ಶಿವಪೂಜೆ ನಡೆಯಲಿದೆ. ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಂಎಫ್ ನಿರ್ದೇಶಕ ಹಾಗೂ ಗಾಂಧಿ ಗ್ರಾಮ ಸಂವಾದ ಸ್ವಾಗತ ಸಮಿತಿಯ ಅಧ್ಯಕ್ಷ ನಾರಾಯಣ ಪ್ರಕಾಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪಾಣಾಜೆ ಗ್ರಾಪಂ ಅಧ್ಯಕ್ಷೆ ಭಾರತಿ ಭಟ್ ಭಾಗವಹಿಸಲಿದ್ದಾರೆ.
ಪತ್ರಕರ್ತ ಬಿ.ಎಂ.ಹನೀಫ್ ‘ಶಿವ ತತ್ವ ಚಿಂತನೆ’, ಕುರಿತು ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ‘ಗಾಂಧೀಜಿಯವರ ಧಾರ್ಮಿಕ ನಂಬಿಕೆಗಳು’ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.
ಗಾಂಧಿ ವಿಚಾರ ವೇದಿಕೆ ಮಾತೃ ಸಮಿತಿಯ ಅಧ್ಯಕ್ಷ ಶ್ರೀಧರ್ ಬಿಡೆ, ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ, ದ.ಕ. ಜಿಲ್ಲಾ ಮಾತೃ ಸಮಿತಿಯ ಅಧ್ಯಕ್ಷ ಅಚ್ಯುತ ಮುಲ್ಕಜೆ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಝೇವಿಯರ್ ಡಿಸೋಜ, ಉಪಾಧ್ಯಕ್ಷೆ ಜೆಸ್ಸಿ ಪಿ.ವಿ. ಗ್ರಾಮ ಸಂವಾದ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಸಾಧಕರಾದ ಭರಣ್ಯ ಬಾಲಕೃಷ್ಣ ಭಟ್, ಮುಹಮ್ಮದ್ ಕುಂಞಿ ಕಂಚಿಲ್ಕುಂಜ, ಸಾಧಕ ಸಂಸ್ಥೆಗಳಾದ ನಮ್ಮ ರಸ್ತೆ ನಮ್ಮ ಹಕ್ಕು ಸಮಿತಿ ಮತ್ತು ಡಿ.ಬಿ. ಕ್ರಿಯೇಶನ್ಸ್ ಪಾಣಾಜೆಯವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಶಾಸಕ ಸಂಜೀವ ಮಠಂದೂರು ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ನಾರಾಯಣ ಪ್ರಕಾಶ್, ವೇದಿಕೆಯ ಪ್ರಧಾನ ಕಾರ್ಯದರ್ಶಿ ಚಿನ್ಮಯ ಕೃಷ್ಣ, ಸಮನ್ವಯಕಾರ ಗಿರೀಶ್ ಭಟ್ ಉಪಸ್ಥಿತರಿದ್ದರು.