ಲುಧಿಯಾನ ನ್ಯಾಯಾಲಯದ ಆವರಣದಲ್ಲಿ ಸ್ಫೋಟ, ಇಬ್ಬರು ಮೃತ್ಯು, 4 ಮಂದಿಗೆ ಗಂಭೀರ ಗಾಯ
Update: 2021-12-23 13:03 IST
ಚಂಡೀಗಡ: ಪಂಜಾಬ್‌ನ ಲುಧಿಯಾನದಲ್ಲಿ ನ್ಯಾಯಾಲಯದ ಸಂಕೀರ್ಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು NDTV ವರದಿ ಮಾಡಿದೆ.
ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಎರಡನೇ ಮಹಡಿಯಲ್ಲಿ ಜಿಲ್ಲಾ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕಟ್ಟಡದ ಎರಡನೇ ಮಹಡಿಯಲ್ಲಿರುವ ಸ್ನಾನಗೃಹದಲ್ಲಿ ಮಧ್ಯಾಹ್ನ 12:22 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಸ್ಫೋಟದ ತೀವ್ರತೆಯು ಎಷ್ಟು ಪ್ರಮಾಣದಲ್ಲಿತ್ತೆಂದರೆ ಅದು ಸ್ನಾನಗೃಹದ ಗೋಡೆಗಳನ್ನು ಹಾನಿಗೊಳಿಸಿತು ಹಾಗೂ ಹತ್ತಿರದ ಕೋಣೆಗಳ ಕಿಟಕಿಗಳ ಗಾಜನ್ನು ಒಡೆದು ಹಾಕಿದೆ.
ನ್ಯಾಯಾಲಯದ ಸಂಕೀರ್ಣವು ಲುಧಿಯಾನ ನಗರದ ಹೃದಯಭಾಗದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಇದೆ.
ಪೊಲೀಸರು ಸ್ಥಳದಲ್ಲಿ ಸುತ್ತುವರಿದಿದ್ದಾರೆ ಮತ್ತು ಅಗ್ನಿಶಾಮಕ ಯಂತ್ರಗಳು ಸ್ಥಳದಲ್ಲಿವೆ.