ದ್ವೇಷ, ಹಿಂಸಾ ಮನೋಭಾವ ತೊರೆದು, ಪ್ರೀತಿ ಸಹೋದರತೆಯೊಂದಿಗೆ ಕ್ರಿಸ್ಮಸ್ ಆಚರಿಸೋಣ
ಮಂಗಳೂರು, ಡಿ.23: ದ್ವೇಷ, ಹಿಂಸಾತ್ಮಕ ಮನೋಭಾವ ತೊರೆದು, ಸಾರ್ವತ್ರಿಕ ಪ್ರೀತಿ, ಸಹೋದರತೆಯೊಂದಿಗೆ ಬದುಕಬೇಕೆನ್ನುವುದು ಏಸುಕ್ರಿಸ್ತರ ಸಂದೇಶವಾಗಿದೆ. ಆ ಸಂದೇಶದೊಂದಿಗೆ ಕ್ರಿಸ್ಮಸ್ ಹಬ್ಬ ಆಚರಿಸೋಣ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತೀ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ ಕರೆ ನೀಡಿದ್ದಾರೆ.
ಬಿಷಪ್ ಹೌಸ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಹಬ್ಬದ ಸಂದೇಶ ನೀಡಿದ ಅವರು, ಕ್ರಿಸ್ಮಸ್ ಎಂದರೆ ದೇವರು ಮಾನವ ರೂಪದಲ್ಲಿ ಕನ್ಯಾ ಮರಿಯಮ್ಮನವರ ಮೂಲಕ ಏಸು ಕ್ರಿಸ್ತರಾಗಿ ಭೂಮಿಯಲ್ಲಿ ಜನಿಸಿದ ದಿನ. ಅವರು ನಮ್ಮನ್ನು ಪಾಪ, ಮರಣ ದ್ವೇಷ, ಹಿಂಸಾತ್ಮಕ ಮನೋಭಾವದಿಂದ ರಕ್ಷಿಸುತ್ತಾರೆ. ಕ್ರಿಸ್ಮಸ್ ಎಲ್ಲರಿಗೂ ಸುಖ ಸಂತೋಷ ನೆಮ್ಮದಿ ಉಂಟು ಮಾಡಲಿ ಹಾರೈಸಿದರು.
ಯೇಸು ತನ್ನ ಜೀವನದ ಆದರ್ಶದ ಮೂಲಕ ಇತರರ ವಿಚಾರದಲ್ಲಿ ಕಾಳಜಿ ವಹಿಸಲು, ಹಂಚಿ ಬಾಳಲು, ವಿರೋಧಿ ಗಳನ್ನು ಕ್ಷಮಿಸಲು, ಯಾರನ್ನೂ ದ್ವೇಷಿಸದೇ ಇರಲು ಕಲಿಸಿರುತ್ತಾರೆ. ಆದ್ದರಿಂದ ನಾವು ಉದಾಸೀನತೆಯನ್ನು ತೊರೆದು ಸ್ವಚ್ಛ ಮನಸ್ಸು, ಶುದ್ಧ ಹೃದಯದಿಂದ ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಗೋ ಗ್ರೀನ್ ಮೂಲಕ ಪ್ರಕೃತಿಯಲ್ಲಿ ದೇವರನ್ನು ಕಾಣುವಂತಾಗಬೇಕು ಎಂದು ಬಿಷಪ್ ತಿಳಿಸಿದ್ದಾರೆ .
ಸುದ್ದಿಗೋಷ್ಠಿಯಲ್ಲಿ ಪಾಲನಾ ಸಮಿತಿಯ ಪ್ರತಿನಿಧಿಗಳಾದ ವಂ.ಜೆ.ಬಿ.ಸಲ್ದಾನ, ವಂ.ಜೋನ್ ಡಿಸಿಲ್ವ, ಸಾರ್ವಜನಿಕ ಸಂಪರ್ಕ ಪ್ರತಿನಿಧಿ ರಾಯ್ ಕ್ಯಾಸ್ಟಲಿನೊ ಮತ್ತು ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ಧರು.