ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಎಲ್ಲಾ ವಿಧದ ಮಾಧ್ಯಮಗಳಲ್ಲಿ ಪಕ್ಷಗಳು ಪ್ರಕಟಿಸಬೇಕು: ಮುಖ್ಯ ಚುನಾವಣಾ ಆಯುಕ್ತ

Update: 2021-12-23 13:45 GMT

ಪಣಜಿ: ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಗಳನ್ನು ಪತ್ರಿಕೆಗಳು, ಟಿವಿ ಚಾನೆಲ್‍ಗಳು ಮತ್ತು ತಮ್ಮ ವೆಬ್‍ಸೈಟ್‍ಗಳಲ್ಲಿ ಪ್ರಕಟಿಸಬೇಕು ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.

ಮುಂಬರುವ ಗೋವಾ ವಿಧಾನಸಭಾ ಚುನಾವಣೆಗೆ ಏರ್ಪಾಟುಗಳನ್ನು ಪರಿಶೀಲಿಸಲು ತಮ್ಮ ತಂಡದೊಂದಿಗೆ ಪಣಜಿಗೆ ಆಗಮಿಸಿದ್ದ  ಸಂದರ್ಭ ಅವರು ಸುದ್ದಿಗಾರರ ಜತೆಗೆ ಮಾತನಾಡುತ್ತಿದ್ದರು.

"ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಏಕೆ ಅಭ್ಯರ್ಥಿಯಾಗಿ ಆರಿಸಲಾಗಿದೆ ಹಾಗೂ ಏಕೆ ನಿಷ್ಕಳಂಕ ಅಭ್ಯರ್ಥಿಯನ್ನು ಆಯ್ಕೆಮಾಡಿಲ್ಲ ಎಂಬುದಕ್ಕೆ ಪಕ್ಷಗಳು ಕಾರಣ ನೀಡಬೇಕು" ಎಂದು ಅವರು ಹೇಳಿದರು.

"ಎಂಬತ್ತು ವರ್ಷಕ್ಕಿಂತ ಮೇಲ್ಪಟ್ಟ ಮತದಾರರಿಗೆ ಮನೆಗಳಿಂದಲೇ ಮತ ಚಲಾಯಿಸಲು ಏರ್ಪಾಟು ಮಾಡಲಾಗಿದೆ. ಇದು ಐಚ್ಛಿಕ ಅವರು ಬೇಕಿದ್ದರೆ ಮತಗಟ್ಟೆಗೆ ಬಂದು ಮತ ಚಲಾಯಿಸಬಹುದು" ಎಂದು ಹೇಳಿದ ಅವರು ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ ಸುಮಾರು 30,000 ಮತದಾರರು ಇದ್ದಾರೆ ಎಂದರು.

ಮನೆಗಳಲ್ಲಿಯೇ ಮತ ಚಲಾಯಿಸುವಾಗ ಅದರ ವೀಡಿಯೋ ಚಿತ್ರೀಕರಣ ನಡೆಸಲಾಗುವುದು ಹಾಗೂ ಮತವನ್ನು ರಹಸ್ಯ ಬ್ಯಾಲೆಟ್‍ನಲ್ಲಿರಿಸಲಾಗುವುದು ಎಂದು ಅವರು ಹೇಳಿದರು.

ಪ್ರಸಕ್ತ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ತಲಾ ಮತಗಟ್ಟೆಯಲ್ಲಿ 1,500ರಿಂದ 1000 ಮತದಾರರು ಮಾತ್ರ ಮತ ಚಲಾಯಿಸುವಂತೆ ಮಾಡಲಾಗುವುದು ಹಾಗೂ 60 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News