×
Ad

ಹಂಗರಿ ಪ್ರಧಾನಿಯ ಮುಸ್ಲಿಂ ವಿರೋಧಿ ಹೇಳಿಕೆಗೆ ಬೋಸ್ನಿಯಾ ಖಂಡನೆ

Update: 2021-12-23 21:24 IST
ವಿಕ್ಟರ್ ಆರ್ಬನ್(photo:facebook/Orbán Viktor)

ಬುದಪೆಸ್ಟ್, ಡಿ.23: ಬೋಸ್ನಿಯಾ ಮತ್ತು ಹರ್ಝೆಗೊವಿನಾ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿರುವುದರಿಂದ ಅದನ್ನು ಯುರೋಪಿಯನ್ ಯೂನಿಯನ್‌ಗೆ ಸೇರಿಸುವುದು ಸವಾಲಿನ ಕಾರ್ಯವಾಗಿದೆ ಎಂಬ ಹಂಗರಿ ಪ್ರಧಾನಿ ವಿಕ್ಟರ್ ಆರ್ಬನ್ ಹಾಗೂ ಅವರ ವಕ್ತಾರರ ಹೇಳಿಕೆಯನ್ನು ಬೋಸ್ನಿಯಾದ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖಂಡರು ಖಂಡಿಸಿದ್ದಾರೆ.

‌2 ಮಿಲಿಯನ್ ಮುಸ್ಲಿಮರು ಇರುವ ದೇಶವನ್ನು ಒಗ್ಗೂಡಿಸುವುದು ಹೇಗೆ ಎಂಬುದೇ ಬೋಸ್ನಿಯಾ ಎದುರಿಸುತ್ತಿರುವ ಸವಾಲಾಗಿದೆ ಎಂದು ಪ್ರಧಾನಿಯ ವಕ್ತಾರ ಝೋಲ್ಟನ್ ಕೊವಾಕ್ಸ್ ಟ್ವೀಟ್ ಮಾಡಿದ್ದರು. 

ಮಂಗಳವಾರ ರಾಜಧಾನಿ ಬುದಪೆಸ್ಟ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಲಪಂಥೀಯ ಮುಖಂಡ ಆರ್ಬನ್, ಯುರೋಪಿಯನ್ ಯೂನಿಯನ್‌ಗೆ ಸೇರ್ಪಡೆಗೊಳ್ಳುವ ಬೋಸ್ನಿಯಾದ ಕ್ರಮಕ್ಕೆ ಹಂಗರಿಯ ಬೆಂಬಲವಿದೆ. ಜತೆಗೆ, ಬಾಲ್ಕನ್‌ಗಳು(ಬಾಲ್ಕನ್ ಪರ್ಯಾಯದ್ವೀಪದಲ್ಲಿ ಇರುವ 11 ದೇಶಗಳು. ಈ ಪದವನ್ನು ಕೆಲವು ಸಂದರ್ಭದಲ್ಲಿ ನಕಾರಾತ್ಮಕ ಅರ್ಥದ ರೂಪದಲ್ಲಿ ಬಳಸಲಾಗುತ್ತದೆ) ಹಂಗರಿಗಿಂತ ಇನ್ನೂ ಬಹಳ ದೂರದಲ್ಲಿದ್ದಾರೆ. ಅಲ್ಲದೆ 2 ಮಿಲಿಯನ್ ಮುಸ್ಲಿಮರು ಇರುವ ದೇಶದ ಭದ್ರತೆಯನ್ನು ನಾವು ಯಾವ ರೀತಿ ನಿರ್ವಹಿಸಲು ಸಾಧ್ಯ ಎಂಬ ಬಗ್ಗೆ ಯುರೋಪ್‌ನ ಘನ ನಾಯಕರಿಗೆ ಮನವರಿಕೆ ಮಾಡಿಕೊಡಲು ನನ್ನಿಂದ ಸಾಧ್ಯವಾದ ಗರಿಷ್ಟ ಪ್ರಯತ್ನ ಮಾಡಲಿದ್ದೇನೆ ಎಂದಿದ್ದರು.

ಈ ಹೇಳಿಕೆಗೆ ಬೋಸ್ನಿಯಾದ ವಿವಿಧ ಪಕ್ಷಗಳು ಹಾಗೂ ಮುಖಂಡರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಅರ್ಬನ್ ಅವರ ಸರಜೆವೊ ರಾಜ್ಯದ ಪ್ರವಾಸವನ್ನು ನಿಷೇಧಿಸಬೇಕೆಂದು ರಾಜಕೀಯ ಪಕ್ಷಗಳು ಆಗ್ರಹಿಸಿವೆ. ಹಂಗರಿ ಪ್ರಧಾನಿ ಆರ್ಬನ್ ಅವರ ಹೇಳಿಕೆ ವಿದೇಶೀಯರನ್ನು ದ್ವೇಷಿಸುವ ಮತ್ತು ಜನಾಂಗವಾದಿ ಹೇಳಿಕೆಯಾಗಿದೆ ಎಂದು ಬೋಸ್ನಿಯಾದ ಮುಸ್ಲಿಮ್ ಸಮುದಾಯದ ಮುಖಂಡ ಗ್ರಾಂಡ್ ಮುಫ್ತಿ ಹುಸೈನ್ ಕವಝೊವಿಕ್ ಟೀಕಿಸಿದ್ದಾರೆ. ಸಂಯುಕ್ತ ಯುರೋಪ್(ಯುರೋಪಿಯನ್ ಯೂನಿಯನ್)ನ ಕಾರ್ಯನೀತಿಯು ಈ ರೀತಿಯ ಸಿದ್ಧಾಂತವನ್ನು ಆಧರಿಸುವುದಾದರೆ ಅದು ಈ ಹಿಂದೆ ನಾಝಿಗಳ ಕಾಲದಲ್ಲಿ ಇದ್ದ ಹಿಂಸಾಚಾರ ಮತ್ತು ನರಹತ್ಯೆಯ ಸಿದ್ಧಾಂತವನ್ನು ಆಧರಿಸಿದ ಯುರೋಪಿಯನ್ ಯೂನಿಯನ್ನ ಒಕ್ಕೂಟದ ಯುಗಕ್ಕೆ ನಮ್ಮನ್ನು ಕೊಂಡೊಯ್ಯಬುದು ಎಂದವರು ಪ್ರತಿಕ್ರಿಯಿಸಿದ್ದಾರೆ.

ಆರ್ಬನ್ ಅವರ ಹೇಳಿಕೆ ನಾಚಿಕೆಗೇಡಿನ ಮತ್ತು ದಾರ್ಷ್ಟ್ಯತನದಿಂದ ಕೂಡಿದೆ ಎಂದು ಬೋಸ್ನಿಯಾದ ಮುಖಂಡ ಸೆಫಿಕ್ ಝಫೆರೋವಿಕ್ ಟೀಕಿಸಿದ್ದಾರೆ. 2 ಮಿಲಿಯನ್ ಬೋಸ್ನಿಯನ್ ಮುಸ್ಲಿಮರನ್ನು ಒಗ್ಗೂಡಿಸುವುದು ಯುರೋಪಿಯನ್ ಯೂನಿಯನ್‌ಗೆ  ಸವಾಲಿನ ಕಾರ್ಯವಲ್ಲ. ಏಕೆಂದರೆ ನಾವು ಈ ಹಿಂದಿನಿಂದಲೂ ಇಲ್ಲಿಯೇ ಬಾಳಿ ಬದುಕಿದ್ದ ಯುರೋಪ್ನ ಮೂಲ ನಿವಾಸಿಗಳು ಹಾಗೂ ಯುರೋಪಿಯನ್ನರು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News