ಸಂಸದರನ್ನು ಅಮಾನತುಗೊಳಿಸಿ ಬಹುಮತ ‘ಉತ್ಪಾದನೆಗೆ’ ಸರಕಾರದ ಯತ್ನ: ಡೆರೆಕ್ ಓ ಬ್ರಿಯಾನ್

Update: 2021-12-23 16:30 GMT
 ಡೆರೆಕ್ ಓ ಬ್ರಿಯಾನ್(photo:PTI)

ಹೊಸದಿಲ್ಲಿ,ಡಿ.23: ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸುವ ಮೂಲಕ ಕೇಂದ್ರ ಸರಕಾರವು ಮೇಲ್ಮನೆಯಲ್ಲಿ ಬಹುಮತವನ್ನು ‘ಉತ್ಪಾದಿಸಲು’ ಯತ್ನಿಸುತ್ತಿದೆ ಎಂದು ರಾಜ್ಯಸಭೆಯಲ್ಲಿ ಟಿಎಂಸಿಯ ನಾಯಕ ಡೆರೆಕ್ ಒಬ್ರಿಯಾನ್ ಗುರುವಾರ ಆಪಾದಿಸಿದ್ದಾರೆ.

ದುರ್ವರ್ತನೆಯ ಆರೋಪದಲ್ಲಿ ಕಾಂಗ್ರೆಸ್‌ನ 6 ಮಂದಿ, ಟಿಎಂಸಿ ಹಾಗೂ ಶಿವಸೇನಾದ ತಲಾ ಇಬ್ಬರು, ಸಿಪಿಐ ಹಾಗೂ ಸಿಪಿಎಂನ ತಲಾ ಓರ್ವ ರಾಜ್ಯ ಸಭಾ ಸದಸ್ಯರನ್ನು ನವೆಂಬರ್ 29ರಂದು ಚಳಿಗಾಲದ ಅಧಿವೇಶನದ ಅವಧಿಯುದ್ದಕ್ಕೂ ಅಮಾನತುಗೊಳಿಸಲಾಗಿತ್ತು.

ಡೆರೆಕ್ ಓಬ್ರಿಯಾನ್ ಅವರನ್ನು ಮಂಗಳವಾರದಂದು ಚುನಾವಣಾ ಸುಧಾರಣಾ ವಿಧೇಯಕದ ಚರ್ಚೆ, ರಾಜ್ಯಸಭಾ ಕಲಾಪ ನಿಯಮಾವಳಿ ಪುಸ್ತಕವನ್ನು ಸಭಾಧ್ಯಕ್ಷರ ಪೀಠದೆಡೆಗೆ ಎಸೆದು,, ರಾಜ್ಯಸಭಾ ಸದಸ್ಯರಿಗೆ ಭೂಷಣವಲ್ಲದ ರೀತಿಯಲ್ಲಿ ವರ್ತಿಸಿದ್ದಾರೆಂದು ಆರೋಪಿಸಿ ಅಮಾನತುಗೊಳಿಸಲಾಗಿತ್ತು. ಬುಧವಾರ ಸಂಸತ್‌ನ ಉಭಯ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಿದ ಕಾರಣ ಡೆರೆಕ್ ಒಬ್ರಿಯಾನ್ ಅವರ ಅಮಾನತು ಕೂಡಾ ಒಂದೇ ದಿನದ ಅವಧಿಗೆ ಕೊನೆಗೊಂಡಿತ್ತು.

ಸಂಸತ್‌ಭವನದ ಮುಂಭಾಗದಲ್ಲಿರುವ ಗಾಂಧಿ ಸ್ಮಾರಕದ ಮುಂದೆ ಧರಣಿ ನಡೆಸುತ್ತಿರುವ ಅಮಾನತುಗೊಂಡ ಸಂಸರೊಂದಿಗೆ ಬುಧವಾರ ಜೊತೆಗೂಡಿದ ಡೆರೆಕ್ ಒಬ್ರಿಯಾನ ಅವರು ‘‘ ಹಿಟ್ಲರ್ ಸಂಸತ್ತನ್ನು ಸುಟ್ಟುಹಾಕಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ಸಂಸತ್‌ಗೆ ನಿಧಾನ ವಿಷವನ್ನು ಉಣಿಸುತ್ತಿದಾರೆ. ಈ ಸರಕಾರವು 12 ಸಂಸದರನ್ನು ಅಮಾನತುಗೊಳಿಸುವ ಮೂಕ ಮೇಲ್ಮನೆಯಲ್ಲಿ ಬಹುಮತವನ್ನು ಉತ್ಪಾದಿಸಲು ಯತ್ನಿಸುತ್ತಿದೆ. ಈ ಆಡಳಿತದಲ್ಲಿ ಪ್ರಜಾಪ್ರಭುತ್ವವನ್ನು ಪ್ರತಿದಿನವೂ ಅಣಕಿಸಲಾಗುತ್ತಿದೆ ಹಾಗೂ ಕಳಚಲಾಗುತ್ತಿದೆ’ ’ ಎಂದು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News