ಡಿ.25: ಉದ್ಯಾವರ ಮಾದವ ಆಚಾರ್ಯರ ನೆನಪಿನಲ್ಲಿ ನಾದನೃತ್ಯ ಕಾರ್ಯಕ್ರಮ
Update: 2021-12-23 22:34 IST
ಮಂಗಳೂರು, ಡಿ.23: ಎಂಭತ್ತಕ್ಕೂ ಅಧಿಕ ರಂಗರೂಪಕಗಳನ್ನು ಪರಿಕಲ್ಪಿಸಿ ನಿರ್ದೇಶಿಸಿದ ಕವಿ ರಂಗ ನಿರ್ದೇಶಕ, ಸಣ್ಣ ಕತೆಗಾರ ಪ್ರೊ. ಉದ್ಯಾವರ ಮಾಧವ ಆಚಾರ್ಯರ ನೆನಪಿನಲ್ಲಿ ನಾದನೃತ್ಯ ಕಾರ್ಯಕ್ರಮವು ನಗರದ ಪುರಭವನದಲ್ಲಿ ಡಿ.25ರ ಸಂಜೆ 5:30ಕ್ಕೆ ನಡೆಯಲಿದೆ.
ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಸಂಸ್ಥೆಯ ಆಯೋಜನೆಯಲ್ಲಿ ನಡೆಯುವ ಹನ್ನೊಂದನೇ ವರುಷದ ಈ ಕಾರ್ಯಕ್ರಮದಲ್ಲಿ ರಾಧೆ ಎಂಬ ಗಾಥೆ ಕವನ ಸಂಕಲನದ ಆಯ್ದ ಸಾಲುಗಳನ್ನು ಸಾಹಿತ್ಯಿಕವಾಗಿ ಪರಿಚಯಿಸಿ ಈ ಕೃತಿಗಿರುವ ಗಾಯನದ ಆಯಾಮ, ನೃತ್ಯ ಆಯಾಮ ಹಾಗೂ ನಾಟ್ಯ ಆಯಾಮಗಳನ್ನು ಕಲಾವಿದರು ಅಭಿವ್ಯಕ್ತಿಸಲಿದ್ದಾರೆ.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನುರೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ನೃತ್ಯಗುರು ಡಾ. ವಸುಂಧರಾ ದೊರೆಸ್ವಾಮಿ ಹಾಗೂ ಕವಿ ಬೆಳಗೋಡು ರಮೇಶ್ ಭಟ್ ನೆನಪಿನ ನುಡಿಗಳನ್ನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.