×
Ad

ಮಂಗಳೂರು: ಮತ್ತೆ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ

Update: 2021-12-23 22:36 IST

ಮಂಗಳೂರು, ಡಿ.23: ನಗರದ ಸ್ಟೇಟ್‌ಬ್ಯಾಂಕ್‌ನ ಬಸ್ ನಿಲ್ದಾಣ ಸಮೀಪ, ಸೆಂಟ್ರಲ್ ಮಾರ್ಕೆಟ್ ಮತ್ತು ಕಂಕನಾಡಿ ಪರಿಸರದ

ಬೀದಿಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಗುರುವಾರ ತೆರವುಗೊಳಿಸಲಾಗಿದೆ. ಶುಕ್ರವಾರವೂ ಕಾರ್ಯಾಚರಣೆ ಮುಂದು ವರಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬುಧವಾರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಎಲ್ಲಾ ಗೂಡಂಗಡಿ ಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಅದರಂತೆ ಗುರುವಾರ ಬೆಳಗ್ಗಿನಿಂದಲೇ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಕಾರ್ಯಾಚರಣೆ ನಡೆಸುವ ಮೂಲಕ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ನಗರದ ಹಲವು ಕಡೆಗಳಲ್ಲಿ ನಡೆಯುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಎತ್ತಂಗಡಿ ನಡೆಯುತ್ತಿತ್ತು. ಬಳಿಕ ಎಂದಿನಂತೆ ವ್ಯಾಪಾರ ಮುಂದುವರಿಯುತ್ತಿತ್ತು.

ತಳ್ಳು ಗಾಡಿಗಳು, ಗೂಡ್ಸ್ ರಿಕ್ಷಾ ಕ್ಯಾಂಟಿನ್ ಸಹಿತ ವಿವಿಧ ರೀತಿಯ ಅಂಗಡಿಗಳನ್ನು ಜೆಸಿಬಿ ಸಹಾಯದಿಂದ ತೆರವು ಗೊಳಿಸಲಾಗಿದೆ. ಎಲ್ಲವನ್ನೂ ನಜ್ಜುಗುಜ್ಜು ಮಾಡಿ ವಾಹನಕ್ಕೆ ಹಾಕಿಕೊಂಡು ಹೋಗಲಾಗಿದೆ. ಗುರುವಾರ ನಡೆದ ಈ ಕಾರ್ಯಾಚರಣೆಗೆ ವ್ಯಾಪಾರಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಮ್ಮ ಬಳಿ ಬೀದಿಬದಿ ವ್ಯಾಪಾರ ಮಾಡಲು ಪಾಲಿಕೆ ನೀಡಿರುವ ಕಾರ್ಡ್ ಇದೆ ಎಂದು ಕೆಲವು ವ್ಯಾಪಾರಿಗಳು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ. ಬೀದಿಬದಿ ವ್ಯಾಪಾರದ ಕಾರ್ಡ್ ಒಂದೇ ಕಡೆಯಲ್ಲಿ ಅಂಗಡಿ ಮಾಡುವುದಕ್ಕೆ ಇರುವುದಲ್ಲ. ತಳ್ಳುಗಾಡಿಯಲ್ಲಿ ವಿವಿಧೆಡೆ ತೆರಳಿ ಮಾರಾಟ ಮಾಡುವುದಕ್ಕೆ ನೀಡಿರುವುದು. ಒಂದೇ ಕಡೆಯಲ್ಲಿ ನಿಂತು ಮಾರಾಟ ಮಾಡುವುದು ನಿಯಮದ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

ವ್ಯಾಪಾರ ಮಾಡುವುದಕ್ಕಾಗಿ ಸಾವಿರಾರು ರೂ. ನೀಡಿ ಖರೀದಿಸಿ ತಂದಿದ್ದ ವಸ್ತುಗಳನ್ನು ತೆರವು ಕಾರ್ಯಾಚರಣೆಯ ಹೆಸರಿನಲ್ಲಿ ಪಾಲಿಕೆಯ ಅಧಿಕಾರಿಗಳು ದೋಚಿದ್ದಾರೆ. ಹಣ್ಣು ಹಂಪಲುಗಳು ಮಣ್ಣಿಗೆ ಬಿದ್ದು ಹಾಳಾಗಿವೆ. ವಸ್ತುಗಳನ್ನು ಬಿಟ್ಟು ಕೊಡಿ ಎಂದರೂ ಕೇಳಲಿಲ್ಲ ಎಂದು ವಾಪಾರಿಯೊಬ್ಬರು ಅಸಮಾಧಾ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ನಡೆದಾಡುವ ಫುಟ್‌ಪಾತ್ ಅತಿಕ್ರಮಿಸಿ, ಗೂಡಂಗಡಿ ನಿರ್ಮಿಸಲಾಗಿದೆ ಎಂದು ಹಿರಿಯ ನಾಗರಿಕರ ಸಹಿತ ಹಲವು ಮಂದಿ ನಿರಂತರವಾಗಿ ದೂರು ನೀಡಿರುವ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಹಿಂದೆಯೂ ಕಾರ್ಯಾಚರಣೆ ಮಾಡಲಾಗಿತ್ತು. ಆದರೆ ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡುತ್ತಾರೆ. ಹಾಗಾಗಿ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಮದು ಮೇಯರ್ ಪ್ರೇಮಾನಂದ ಶೆಟ್ಟಿತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News