×
Ad

ಹಾಂಕಾಂಗ್: ತಿಯನಾನ್ಮೆನ್ ಹತ್ಯಾಕಾಂಡದ ಸ್ಮಾರಕ ತೆರವು

Update: 2021-12-23 22:56 IST
photo:PTI

ಹಾಂಕಾಂಗ್, ಡಿ.23: ಚೀನಾದ ತಿಯನಾನ್ಮೆನ್ ವೃತ್ತದಲ್ಲಿ 1989ರಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಚೀನಾದ ಪಡೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಹಾಂಕಾಂಗ್‌ನಲ್ಲಿ ನಿರ್ಮಿಸಿದ್ದ ಸ್ಮಾರಕವನ್ನು ತೀವ್ರ ಆಕ್ಷೇಪದ ಮಧ್ಯೆಯೇ ಗುರುವಾರ ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ. ‌

26 ಅಡಿ ಎತ್ತರದ ‘ಪಿಲ್ಲರ್ ಆಫ್ ಶೇಮ್’ (ಅವಮಾನದ ಸ್ಥಂಭ) ಎಂದು ಹೆಸರಿಸಲಾಗಿರುವ ಸ್ಮಾರಕ ಸ್ಥಂಭವನ್ನು 1997ರಲ್ಲಿ ಡೆನ್ಮಾರ್ಕ್‌ನ ವಾಸುಶಿಲ್ಪಿ ಜೆನ್ಸ್ ಗಾಲ್ಷಿಯಟ್ ನಿರ್ಮಿಸಿದ್ದು ಇದನ್ನು ಹಾಂಕಾಂಗ್ ವಿವಿಯ ಆವರಣದಲ್ಲಿ ಸ್ಥಾಪಿಸಲಾಗಿದೆ. 

ಈ ಸ್ಥಂಭದಲ್ಲಿ ಜರ್ಝರಿತಗೊಂಡ ಹಾಗೂ ವಿರೂಪಗೊಂಡ 50 ಮೃತದೇಹಗಳನ್ನು ಒಂದೆಡೆ ರಾಶಿಹಾಕಿರುವ ಚಿತ್ರವನ್ನು ಕೆತ್ತಲಾಗಿದೆ. 1989ರ ಜೂನ್ 4ರಂದು ಬೀಜಿಂಗ್‌ನ ತಿಯನಾನ್ಮೆನ್ ವೃತ್ತದಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಚೀನಾ ಸೇನೆ ಕೈಗೊಂಡ ಕ್ರೂರ ಕಾರ್ಯಾಚರಣೆಯಲ್ಲಿ ಮೃತರಾದವರನ್ನು ಈ ಚಿತ್ರಗಳು ಸಂಕೇತಿಸುತ್ತವೆ. 1997ರಲ್ಲಿ ಹಾಂಕಾಂಗ್ನ ಆಡಳಿತ ನಿರ್ವಹಣೆಯನ್ನು ಬ್ರಿಟನ್‌ನಿಂದ ಚೀನಾಕ್ಕೆ ಹಸ್ತಾಂತರಿಸಲಾಗಿತ್ತು.

ಅಕ್ಟೋಬರ್‌ನಲ್ಲಿ ಈ ಸ್ಮಾರಕ ವಿವಾದಕ್ಕೆ ಕಾರಣವಾಗಿದ್ದು ಅದನ್ನು ತಕ್ಷಣ ತೆರವುಗೊಳಿಸುವಂತೆ ವಿವಿ ಆಡಳಿತ ಸೂಚಿಸಿತ್ತು. ಇದಕ್ಕೆ ಮಾನವ ಹಕ್ಕು ಕಾರ್ಯಕರ್ತರು ಮತ್ತು ಸಂಘಟನೆಗಳ ತೀವ್ರ ವಿರೋಧ ವ್ಯಕ್ತವಾಗಿತ್ತು. ತನ್ನನ್ನು ಹಾಂಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಕಾನೂನು ಪ್ರಕ್ರಿಯೆಗೆ ಒಳಪಡಿಸುವುದಿಲ್ಲ ಎಂದು ಖಾತರಿ ನೀಡಿದರೆ ಸ್ಮಾರಕವನ್ನು ಡೆನ್ಮಾರ್ಕ್ ಗೆ ಕೊಂಡೊಯ್ಯಲು ಸಿದ್ಧ ಎಂದು ಗಾಲ್ಷಿಯಟ್ ಹೇಳಿದ್ದರು. ಆದರೆ ಇದಕ್ಕೆ ಹಾಂಕಾಂಗ್ ಆಡಳಿತ ಪ್ರತಿಕ್ರಿಯೆ ನೀಡಿಲ್ಲ.

ಭಾರೀ ಭದ್ರತೆಯ ನಡುವೆ ಬುಧವಾರ ರಾತ್ರಿ ಸ್ಮಾರಕವನ್ನು ವಿವಿ ಆವರಣದಿಂದ ತೆರವುಗೊಳಿಸಲಾಗಿದೆ. ಬಾಹ್ಯ ಕಾನೂನು ಸಲಹೆ ಮತ್ತು ವಿವಿಯ ಹಿತಾಸಕ್ತಿಯ ದೃಷ್ಟಿಯಿಂದ ಸ್ಮಾರಕವನ್ನು ತೆರವುಗೊಳಿಸಿ ದಾಸ್ತಾನು ಕೊಠಡಿಯಲ್ಲಿರಿಸಲಾಗಿದೆ ಎಂದು ವಿಶ್ವವಿದ್ಯಾನಿಲಯ ಹೇಳಿಕೆ ನೀಡಿದೆ. ಸ್ಮಾರಕ ಸ್ಥಾಪಿಸಲು ಯಾವುದೇ ಸಂಘಟನೆ ಅನುಮತಿ ಪಡೆದಿಲ್ಲ ಎಂದಿರುವ ವಿವಿ, ತನ್ನ ಕಾರ್ಯಕ್ಕೆ ಸಮರ್ಥನೆಯಾಗಿ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ ವಸಾಹತು ಶಾಹಿ ಯುದ ಆಧ್ಯಾದೇಶವನ್ನು ಉಲ್ಲೇಖಿಸಿದೆ.

ಸ್ಮಾರಕವನ್ನು ತೆರವುಗೊಳಿಸುವುದಾಗಿ ಕಳೆದ ಅಕ್ಟೋಬರ್ನಲ್ಲಿ ವಿವಿ ಅಧಿಕಾರಿಗಳು ಹಾಂಕಾಂಗ್ ಅಲಯನ್ಸ್ ಇನ್ ಸಪೋರ್ಟ್ ಆಫ್ ಪ್ಯಾಟ್ರಿಯಾಟಿಕ್ ಡೆಮೊಕ್ರಾಟಿಕ್ ಮೂಮೆಂಟ್ಸ್ ಆಫ್ ಚೀನಾ’  ಪಕ್ಷಕ್ಕೆ ಮಾಹಿತಿ ರವಾನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಘಟನೆಯ ಮುಖಂಡರು, ಈಗಿರುವ ದಬ್ಬಾಳಿಕೆ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಕಷ್ಟವಾಗಿರುವುದರಿಂದ ಪಕ್ಷವನ್ನು ವಿಸರ್ಜಿಸಲಾಗುತ್ತಿದೆ ಮತ್ತು ಈ ಸ್ಮಾರಕ ತನಗೆ ಸೇರಿದ್ದಲ್ಲ ಎಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News